2006ರ ಮಾಲೆಗಾಂವ್ ಸ್ಫೋಟ ಪ್ರಕರಣ: ಎನ್‌ಐಎ ಯುಟರ್ನ್‌ಗೆ ರೋಹಿಣಿ ಸಾಲ್ಯಾನ್ ಆಕ್ರೋಶ

Update: 2016-04-14 14:10 GMT

ಪುಣೆ,ಎ.14: 2006ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಲಪಂಥೀಯ ಹಿಂದೂ ಉಗ್ರಗಾಮಿಗಳು ಶಾಮೀಲಾಗಿದ್ದಾರೆಂಬ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ತನಿಖಾವರದಿಯನ್ನಾಧರಿಸಿ, ಹೆಚ್ಚು ‘ದೃಢವಾದ’ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ತಾನು ಹೆಚ್ಚು ಕಾಲಾವಕಾಶ ಕೋರಿದ್ದೆ. ಆದರೆ, ತನ್ನ ಅರಿವಿಗೆ ಬಾರದಂತೆ ಸಹದ್ಯೋಗಿಯೊಬ್ಬ, ಆಗಲೇ ಚಾರ್ಜ್‌ಶೀಟ್ ಸಲ್ಲಿಸಿದ್ದಾನೆಂಬುದು ತನಗೆ ಆನಂತರ ತಿಳಿಯಿತೆಂದು ಮಾಜಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಗುರುವಾರ ಬಹಿರಂಗಪಡಿಸಿದ್ದಾರೆ.

    2006ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾಗಿರುವ 9 ಮಂದಿ ಮುಸ್ಲಿಮರನ್ನು ಸ್ಫೋಟ ಪ್ರಕರಣದೊಂದಿಗೆ ನಂಟು ಕಲ್ಪಿಸುವಂತಹ ಪುರಾವೆಗಳು ತನ್ನಲ್ಲಿಲ್ಲವೆಂದು ವಿಶೇಷ ಮಕೋಕಾ ನ್ಯಾಯಾಲಯಕ್ಕೆ ತಿಳಿಸಿದ ಎರಡು ವರ್ಷಗಳ ಬಳಿಕ ಯುಟರ್ನ್ ಹೊಡೆದಿರುವ ಎನ್‌ಐಎ, ಅವರ ವಿರುದ್ಧದ ಆರೋಪಗಳನ್ನು ಕೈಬಿಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆಯೆಂದು ಮಂಗಳವಾರ ‘ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ’ಯಲ್ಲಿ ಪ್ರಕಟವಾದ ವರದಿಗೆ ಸಾಲ್ಯಾನ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

  9 ಮಂದಿ ಮುಸ್ಲಿಂ ಆರೋಪಿಗಳ ವಿರುದ್ಧದ ಜಾಮೀನು ಅರ್ಜಿಗಳನ್ನು ವಿರೋಧಿಸಲು ತಾನು ಬಯಸುವುದಿಲ್ಲವೆಂದು ಎನ್‌ಐಎ 2014ರ ಎಪ್ರಿಲ್‌ನಲ್ಲಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಸಂದರ್ಭದಲ್ಲಿ ತಾನು ಹಾಜರಿದ್ದುದಾಗಿ ಸಾಲ್ಯಾನ್ ತಿಳಿಸಿದ್ದಾರೆ. ‘‘ ಈ ವಿಷಯವಾಗಿ ಆಗ ನ್ಯಾಯಾಲಯದಲ್ಲಿ ಹೆಚ್ಚು ಚರ್ಚೆ ಅಥವಾ ವಾದಗಳು ನಡೆದಿರಲಿಲ್ಲ. ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ತನ್ನ ವಿರೋಧವಿಲ್ಲವೆಂದು ಎನ್‌ಐಎ ನ್ಯಾಯಾಲಯಕ್ಕೆ ನೇರವಾಗಿ ತಿಳಿಸಿತ್ತು ಎಂದರು.

   ‘‘2006ರ ಮಾಲೆಗಾಂವ್ ಸ್ಫೋಟದ ಹಿಂದೆ ಹಿಂದೂ ತೀವ್ರವಾದಿ ಗುಂಪಿನ ಕೈವಾಡವಿದೆಯೆಂಬುದನ್ನು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆಯೆಂದು ತನಿಖಾಧಿಕಾರಿ ಸುಹಾಸ್‌ವಾರ್ಕೆ ತನಗೆ ತಿಳಿಸಿದ್ದರು. ಮಾರನೆ ದಿನ ಬೆಳಗ್ಗೆ, ದೋಷಾರೋಪ ಪಟ್ಟಿಯ ಸಲ್ಲಿಕೆಗಾಗಿ ನಾನು ಹದಿನೈದು ದಿನಗಳ ವಿಸ್ತರಣೆಯನ್ನು ಕೋರಿದ್ದೆ. ಆದೇ ದಿನ ಮಧ್ಯಾಹ್ನ, ಅವರ ಪರವಾಗಿ ಇನ್ನೋರ್ವ ಪ್ರಾಸಿಕ್ಯೂಟರ್ ಚಾರ್ಜ್‌ಶೀಟ್ ಸಲ್ಲಿಸಿದ್ದ, ಈ ವಿಷಯ ನನಗೆ ಆನಂತರವಷ್ಟೇ ತಿಳಿದುಬಂದಿತು’ ಎಂದು ಸಾಲ್ಯಾನ್‌ಹೇಳಿದ್ದಾರೆ.

 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳ ಬಗ್ಗೆ ಮೃದುಧೋರಣೆ ತಳೆಯುವಂ ತನ್ನ ಮೇಲೆ ಎನ್‌ಐಎ ಅಧಿಕಾರಿ ಸುಹಾಸ್ ವಾರ್ಕೆ ಒತ್ತಡ ಹೇರಿದ್ದರೆಂದು ರೋಹಿಣಿ ಸಾಲ್ಯಾನ್ ಕಳೆದ ವರ್ಷ ಸುದ್ದಿಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದರು.

 ಮಾಲೆಗಾಂವ್‌ನಲ್ಲಿ 2006ರಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದರು. ಇದಾದ ಎರಡು ವರ್ಷಗಳ ಬಳಿಕ ಅಂದರೆ 2006ರಲ್ಲಿ ನಡೆದ ಸ್ಫೋಟವು ನಾಲ್ವರನ್ನು ಬಲಿತೆಗೆದುಕೊಂಡಿತ್ತು.

‘‘2006ರ ಮಾಲೆಗಾಂವ್ ಸ್ಫೋಟದ ಹಿಂದೆ ಹಿಂದೂ ತೀವ್ರವಾದಿ ಗುಂಪಿನ ಕೈವಾಡವಿದೆಯೆಂಬುದನ್ನು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆಯೆಂದು ತನಿಖಾಧಿಕಾರಿ ಸುಹಾಸ್‌ವಾರ್ಕೆ ತನಗೆ ತಿಳಿಸಿದ್ದರು. ಮಾರನೆ ದಿನ ಬೆಳಗ್ಗೆ, ದೋಷಾರೋಪ ಪಟ್ಟಿಯ ಸಲ್ಲಿಕೆಗಾಗಿ ನಾನು ಹದಿನೈದು ದಿನಗಳ ವಿಸ್ತರಣೆಯನ್ನು ಕೋರಿದ್ದೆ. ಆದೇ ದಿನ ಮಧ್ಯಾಹ್ನ, ಅವರ ಪರವಾಗಿ ಇನ್ನೋರ್ವ ಪ್ರಾಸಿಕ್ಯೂಟರ್ ಚಾರ್ಜ್‌ಶೀಟ್ ಸಲ್ಲಿಸಿದ್ದ, ಈ ವಿಷಯ ನನಗೆ ಆನಂತರವಷ್ಟೇ ತಿಳಿದುಬಂದಿತು’’.

ರೋಹಿಣಿ ಸಾಲ್ಯಾನ್

ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News