ಐಫೋನ್ ಹ್ಯಾಕ್ ಮಾಡಿದ ವಿಧಾನ ಆ್ಯಪಲ್‌ಗೆ ತಿಳಿಯಲಾರದು
Update: 2016-04-14 21:29 IST
ಸಾನ್ ಫ್ರಾನ್ಸಿಸ್ಕೊ, ಎ. 14: ಸ್ಯಾನ್ ಬರ್ನಾಡಿನೊ ಶೂಟರ್‌ನ ಐಫೋನನ್ನು ಎಫ್‌ಬಿಐಗೆ ತೆರೆದುಕೊಟ್ಟ ಹ್ಯಾಕರ್ ಕಂಪೆನಿಯು, ಫೋನ್ ತೆರೆಯಲು ತಾನು ಬಳಸಿದ ವಿಧಾನದ ಸಂಪೂರ್ಣ ಕಾನೂನುಬದ್ಧ ಒಡೆತನವನ್ನು ಹೊಂದಿದೆ. ಹಾಗಾಗಿ, ಈ ತಂತ್ರವನ್ನು ಸರಕಾರವು ಐಫೋನ್ ತಯಾರಕ ಸಂಸ್ಥೆ ಆ್ಯಪಲ್ ಅಥವಾ ಇನ್ನಾವುದೇ ಸಂಸ್ಥೆಗೆ ಬಹಿರಂಗಪಡಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಒಬಾಮ ಆಡಳಿತದ ಮೂಲಗಳು ಹೇಳಿವೆ.
ತಂತ್ರಜ್ಞಾನ ಭದ್ರತಾ ದೋಷಗಳನ್ನು ಪರಿಶೀಲನೆ ನಡೆಸುವ ಹಾಗೂ ಯಾವುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎನ್ನುವುದನ್ನು ನಿರ್ಧರಿಸುವ ವಿಧಾನವೊಂದನ್ನು ಶ್ವೇತಭವನ ಹೊಂದಿದೆ. ಆದರೆ, ಈ ವಿಧಾನವನ್ನು ಖಾಸಗಿ ಕಂಪೆನಿಗಳ ದೋಷವನ್ನು ನಿಭಾಯಿಸಲು ಸ್ಥಾಪಿಸಲಾಗಿಲ್ಲ ಎಂದು ಮೂಲಗಳು ತಿಳಿಸಿದವು.
ಭಯೋತ್ಪಾದಕರು ಬಳಸಿದ ಐಫೋನನ್ನು ತೆರೆಯಲು ಬಳಸಿದ ತಂತ್ರಜ್ಞಾನವನ್ನು ಪೂರೈಸಿದ್ದು ಅಮೆರಿಕೇತರ ಕಂಪೆನಿಯಾಗಿದೆ ಎಂದು ಮೂಲಗಳು ಹೇಳಿವೆಯಾದರೂ, ಆ ಕಂಪೆನಿಯನ್ನು ಗುರುತಿಸಲು ನಿರಾಕರಿಸಿವೆ.