ಪನಾಮ ಕಾನೂನು ಕಂಪೆನಿ ವಿರುದ್ಧ ಕ್ರಮಕ್ಕೆ ಸದ್ಯ ಪುರಾವೆಯಿಲ್ಲ : ಪ್ರಾಸಿಕ್ಯೂಟರ್

Update: 2016-04-14 16:20 GMT

ಪನಾಮ ಸಿಟಿ (ಪನಾಮ), ಎ. 14: ಪನಾಮ ದಾಖಲೆಗಳ ಹಗರಣದ ಕೇಂದ್ರದಲ್ಲಿರುವ ಪನಾಮದ ಕಾನೂನು ಸಂಸ್ಥೆ ಮೊಸಾಕ್ ಫೊನ್ಸೆಕ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಈವರೆಗೆ ಯಾವುದೇ ಪುರಾವೆ ಲಭಿಸಿಲ್ಲ ಎಂದು ಪನಾಮದ ಸಂಘಟಿತ ಅಪರಾಧದ ವಿರುದ್ಧದ ಪಬ್ಲಿಕ್ ಪ್ರಾಸಿಕ್ಯೂಟರ್ ಬುಧವಾರ ಹೇಳಿದ್ದಾರೆ.

‘‘ತಕ್ಷಣಕ್ಕೆ ಮೊಸಾಕ್ ಫೊನ್ಸೆಕ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಅವಕಾಶ ನೀಡುವ ಯಾವುದೇ ಬಲವಾದ ಪುರಾವೆ ನಮ್ಮ ಬಳಿ ಇಲ್ಲ’’ ಎಂದು 27 ಗಂಟೆಗಳ ಕಾಲ ಅದರ ಕಚೇರಿಗಳನ್ನು ಜಾಲಾಡಿದ ಬಳಿಕ ಪ್ರಾಸಿಕ್ಯೂಟರ ಜೇವಿಯರ್ ಕ್ಯಾರಬಲೊ ಸುದ್ದಿಗಾರರಿಗೆ ತಿಳಿಸಿದರು.

ಈ ಸಂಸ್ಥೆಯು ವಿದೇಶಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಿದೆ ಹಾಗೂ ಪ್ರಪಂಚದಾದ್ಯಂತ ಇರುವ ಶ್ರೀಮಂತ ಕಕ್ಷಿಗಾರರ ಪರವಾಗಿ ಕೆಲವು ಉದ್ಯಮಗಳನ್ನು ನಡೆಸುತ್ತಿದೆ ಎಂಬ ಮಾಧ್ಯಮ ವರದಿಗಳ ಆಧಾರದಲ್ಲಿ ಪನಾಮದ ಬ್ಯಾಂಕಿಂಗ್ ಜಿಲ್ಲೆಯಲ್ಲಿರುವ ಕಾನೂನು ಸಂಸ್ಥೆಯ ಕಚೇರಿಗಳ ಮೇಲೆ ಮಂಗಳವಾರ ದಾಳಿ ಆರಂಭಿಸಲಾಗಿತ್ತು.

‘‘ನಾವು ಈಗ ಸಂಗ್ರಹಿಸಿದ ಮಾಹಿತಿಗಳ ವಿಶ್ಲೇಷಣೆಯ ಬಳಿಕ, ಕಂಪೆನಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’’ ಎಂದು ಕ್ಯಾರಬಲೊ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News