ಕೇವಲ ಶಂಕೆಯು ಸಾಕ್ಯಾಧಾರವಾಗುವುದಿಲ್ಲ:ನ್ಯಾಯಾಲಯ
ಹೊಸದಿಲ್ಲಿ,ಎ.14: ಕೇವಲ ಶಂಕೆಯು ಕಾನೂನಾತ್ಮಕ ಸಾಕ್ಷಾಧಾರವಾಗುವುದಿಲ್ಲ ಮತ್ತು ತನ್ನ ಪ್ರಕರಣವನ್ನು ಶಂಕಾತೀತವಾಗಿ ರುಜುವಾತುಗೊಳಿಸಲು ಸರಕಾರವು ಕರ್ತವ್ಯಬದ್ಧವಾಗಿದೆ ಎಂದು ಗುರುವಾರ ಹೇಳಿದ ದಿಲ್ಲಿಯ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯವು, ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯನ್ನು ಬಿಡುಗಡೆಗೊಳಿಸಿತು.
ಕೇವಲ ಊಹೆಗಳು ಅಥವಾ ಶಂಕೆಗಳು ಕಾನೂನಾತ್ಮಕ ಸಾಕ್ಷದ ಜಾಗವನ್ನು ಆಕ್ರಮಿಸದಂತೆ ನೋಡಿಕೊಳ್ಳುವ ಕಠಿಣ ಕರ್ತವ್ಯವನ್ನು ನ್ಯಾಯಾಲಯವು ಹೊಂದಿದೆ. ಸರಕಾರವು ತನ್ನ ಪ್ರಕರಣವನ್ನು ಸಂಶಯಾತೀತವಾಗಿ ಸಿದ್ಧಗೊಳಿಸುವ ಕರ್ತವ್ಯಬದ್ಧತೆಯನ್ನು ಹೊಂದಿದೆ ಎಂದು ಅದು ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಬಿಹಾರ ಮೂಲದ ವೀರು ಕುಮಾರ ಕೊಲೆ ಆರೋಪವನ್ನು ಎದುರಿಸುತ್ತಿದ್ದ ವ್ಯಕ್ತಿ. ಆತನ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪಿಂಟೂ ಎಂಬಾತನ ಶವ 2014,ಮಾರ್ಚ್‌ನಲ್ಲಿ ವಾಯುವ್ಯ ದಿಲ್ಲಿಯ ರಾಮ ವಿಹಾರ ಪ್ರದೇಶದಲ್ಲಿ ಪತ್ತೆಯಾಗಿತ್ತು. ವೀರುನ ರೂಮ್‌ಮೇಟ್ ಉಮೇಶ ಎಂಬಾತನ ಹೇಳಿಕೆಯ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಹಣಕಾಸಿನ ವಿಷಯದಲ್ಲಿ ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಪರ್ಯವಸಾನಗೊಂಡಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಪ್ರಾಸಿಕ್ಯೂಷನ್ ವಾದದಲ್ಲಿ ಅಸಮಂಜಸತೆಗಳಿವೆ ಎಂದು ಹೇಳಿದ ನ್ಯಾಯಾಲಯವು ಆರೋಪಿಗೆ ಸಂಶಯದ ಲಾಭವನ್ನು ನೀಡಿ ಬಿಡುಗಡೆಗೊಳಿಸಿತು.