ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಧರಣಿ

Update: 2016-04-15 06:34 GMT

ಮಂಗಳೂರು, ಎ. 25: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಅಖಿಲ ಭಾರತ ವಿಚಾರವೇದಿಕೆಯ ಅಧ್ಯಕ್ಷ ನರೇಂದ್ರ ನಾಯಕ್ ಮಾತನಾಡಿ, ವಿನಾಯಕ ಬಾಳಿಗಾ ಹತ್ಯೆಯ ವಿರುದ್ಧ ಸಚಿವ ಯು.ಟಿ.ಖಾದರ್ ಹೊರತುಪಡಿಸಿ ಇತರ ಕಾಂಗ್ರೆಸ್ ಮುಖಂಡರು ವೌನವಾಗಿದ್ದಾರೆ. ವಿನಾಯಕ ಬಾಳಿಗ ಬಿಜೆಪಿ ಕಾರ್ಯಕರ್ತನಾಗಿದ್ದರೂ ಬಿಜೆಪಿ ಮುಖಂಡರೂ ಮೌನವಾಗಿದ್ದಾರೆ. ಅನ್ಯಾಯ ಕಂಡೂ ಕೂಡ ಕೆಲವೇ ಜನ ಹೊರತುಪಡಿಸಿ ಮಂಗಳೂರಿನ ಜನ ಮೌನವಾಗಿದ್ದಾರೆ. ಇದರ ಹಿಂದೆ ದೊಡ್ಡ ಮಾಫಿಯವಿದೆ ಎಂದರು.
ಸರಕಾರಕ್ಕೆ ಕೋಟ್ಯಂತರ ರೂ. ವಂಚಿಸುತ್ತಿದ್ದ ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಮಾಫಿಯಾಗಳು, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳ ಪ್ರಮುಖರ, ಬ್ಯಾಂಕರ್‌ಗಳ ವಂಚನೆಗಳನ್ನು ಬಯಲಿಗೆಳೆಯುತ್ತಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗರ ಕೊಲೆ ನಡೆದು ವಾರಗಳು ಕಳೆದರೂ ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿನಾಯಕ ಬಾಳಿಗರ ಕೊಲೆಯ ಹಿಂದಿನ ನೈಜ ಆರೋಪಿಗಳನ್ನು ಕೂಡಲೆ ಬಂಧಿಸಬೇಕು, ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಪ್ರತ್ಯೇಕ ತಂಡ ರಚಿಸಬೇಕು, ಅನಾಥವಾಗಿರುವ ಬಾಳಿಗರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ದಯಾನಂದ ಶೆಟ್ಟಿ, ವಿ.ಸೀತಾರಾಮ್ ಬೇರಿಂಜ, ಎಂ.ಕರುಣಾಕರ್ ಕುಲಾಲ್, ಸಂತೋಷ್ ಬಜಾಲ್, ರೆನ್ನಿಡಿಸೋಜ, ಗಣೇಶ್ ಬಾಳಿಗ, ಇಮ್ತಿಯಾಝ್ ಬಿ.ಕೆ, ನಿತಿನ್ ಕುತ್ತಾರ್, ಚರಣ್ , ದಿನೇಶ್ ಹೆಗ್ಡೆ ಉಳಿಪಾಡಿ, ವಿದ್ಯಾರ್ಥಿ ಯುವಜನ, ದಲಿತ, ಮಹಿಳಾ ಸಂಘಟನೆಗಳು, ಮಾನವ ಹಕ್ಕು, ಆರ್‌ಟಿಐ ಕಾರ್ಯಕರ್ತರ ಒಕ್ಕೂಟಗಳ ಸದಸ್ಯರು ಧರಣಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News