ಕೇಂದ್ರಸರಕಾರದ ವಿರುದ್ಧ ಬೀಡಿ ಕಾರ್ಮಿಕರ ಪ್ರತಿಭಟನೆ
ಬೆಳ್ತಂಗಡಿ, ಎ. 15: ಕಾರ್ಪೂರೇಟ್ ಸಂಸ್ಥೆಗಳ ಮರ್ಜಿಗೆ ಒಳಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬೀಡಿಕಾರ್ಮಿಕರ ಬದುಕು ಬರ್ಬರಗೊಳಿಸಿದೆ ಎಂದು ಜೆ.ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.
ಬೀಡಿ ಉದ್ಯಮವನ್ನು ಉಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ಶುಕ್ರವಾರ ಬೀಡಿ ಕಾರ್ಮಿಕರು ನಡೆಸಿದ ಧರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಆರೋಗ್ಯದ ನೆಪದಲ್ಲಿ ಕೈಗಾರಿಕೆಯನ್ನು ಸದೆಬಡಿಯಲು ಕೇಂದ್ರ ಸರಕಾರ ಮುಂದಾಗಿದೆ. ಸಾಧ್ಯವಿದ್ದರೆ ಎಲ್ಲ ಮಾದಕ ಉತ್ಪನ್ನಗಳನ್ನು ಸರಕಾರ ನಿಷೇಧಿಸಲಿ ಎಂದು ಬಾಲಕೃಷ್ಣ ಸವಾಲು ಹಾಕಿದರು.
ಎ.1ರಿಂದ ಬೀಡಿ ಕೈಗಾರಿಕೆ ಮುಚ್ಚುಗಡೆಯಾಗಿ ಅವಿಭಜಿತ ದಕ ಜಿಲ್ಲೆಯಲ್ಲಿ ಐದು ಲಕ್ಷ ಕಾರ್ಮಿಕರು ಬೀದಿಪಾಲಗುತ್ತಿದ್ದರೂ ನಮ್ಮ ಶಾಸಕರು, ಸಂಸದರು ಗಾಢನಿದ್ರೆಯಲ್ಲಿದ್ದಾರೆ. ಇದು ಹೀಗೇ ಮುಂದುವರಿದರೆ ಅವರ ನಿದ್ರೆಯನ್ನು ಬಿಡಿಸುವ ಕೆಲಸಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರಕಾರ ಕೂಡ ಕಳೆದ 2 ವರ್ಷಗಳಿಂದ ಬೀಡಿ ಕಾರ್ಮಿಕರ ತುಟ್ಟಿಭತ್ತೆಯನ್ನು ತಡೆಹಿಡಿದಿದೆ. ಆ ಮೂಲಕ ಕಾರ್ಮಿಕರನ್ನು ಬೀದಿಪಾಲು ಮಾಡುವಲ್ಲಿ ಕಾಂಗ್ರೆಸ್, ಬಿಜೆಪಿ ಸಮಾನ ಆರೋಪಿಗಳು ಎಂದು ಅವರು ಕಿಡಿಕಾರಿದರು.
ಈ ಬಗ್ಗೆ ಎ. 19ರಂದು ಬೀಡಿ ಕಂಪೆನಿಗಳ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಬಾಲಕೃಷ್ಣ ಎಚ್ಚರಿಸಿದರು.
ಬಿ.ಎಂ.ಭಟ್ ಮಾತನಾಡಿದರು. ಧರಣಿಯ ನೇತೃತ್ವವನ್ನು ಸಂಘಟನೆಯ ಮುಖಂಡರಾದ ಶಿವಕುಮಾರ್, ಈಶ್ವರಿ, ಶೇಖರ, ರೋಹಿಣಿ, ನಫೀಸಾ ವಹಿಸಿದ್ದರು.