ಅರಣ್ಯ- ಸಮಾಜ ಕಲ್ಯಾಣ ಇಲಾಖೆ ಉನ್ನತ ಮಟ್ಟದ ಸಭೆ: ಸಚಿವ ಆಂಜನೇಯ
ಮಂಗಳೂರು, ಎ. 15: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರಣ್ಯದಲ್ಲಿ ವಾಸವಾಗಿರುವ ಆದಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಪೂರಕವಾಗುವಂತೆ ಅರಣ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಉನ್ನತ ಮಟ್ಟದ ಸಭೆಯನ್ನು ಶೀಘ್ರವೇ ನಡೆಸುವುದಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಎಚ್. ಆಂಜನೇಯ ತಿಳಿಸಿದ್ದಾರೆ.
ತಮ್ಮ ಹುಟ್ಟುಹಬ್ಬ ದಿನವಾದ ಇಂದು ಮುಲ್ಕಿಯ ಪಡುಪಣಂಬೂರಿನ ಕೆರೆಕಾಡು ಕೊರಗರ ಹಾಡಿ(ಕಾಲನಿ)ಯಲ್ಲಿ ಇಂದು ಗ್ರಾಮ ವಾಸ್ತವ್ಯಕ್ಕೆ ಆಗಮಿಸಿರುವ ಸಚಿವರು ಕಾರ್ಯಕ್ರಮದ ಉದ್ಘಾಟನ ಕಾರ್ಯಕ್ರಮದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಪ್ರಕಟಿಸಿರುವ ಪರಿಶಿಷ್ಟ ಪಂಗಡದ ಸರ್ವತೋಮುಖ ಅಭಿವೃದ್ಧಿಗಾಗಿ ಸರಕಾರದ ಯೋಜನೆಗಳು/ ಕಾರ್ಯಕ್ರಮಗಳ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಚಾಮರಾಜನಗರ, ಮೈಸೂರು, ಕೊಡಗು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ದ.ಕ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಒಗ್ಗೂಡಿಸಿ ಈ ಸಭೆ ನಡೆಸುವ ಮೂಲಕ ಅರಣ್ಯ ಕಾಯಿದೆಯಿಂದ ಆದಿವಾಸಿಗಳಿಗೆ ಆಗುತ್ತಿರುವ ತೊಂದರೆ, ಅಭಿವೃದ್ಧಿ ಕಾಮಗಾರಿಗಳಲ್ಲಿನ ತೊಡಕನ್ನು ನಿವಾರಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬುಡಕಟ್ಟು ಜನಾಂಗದವರು ಅಧಿಕ ಸಂಖ್ಯೆಯಲ್ಲಿರುವ ಏಳು ಜಿಲ್ಲೆಗಳಲ್ಲಿ ಗ್ರಾಮವಾಸ್ತವ್ಯದ ಆಶಯದೊಂದಿಗೆ ಈಗಾಗಲೇ 5 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ 6ನೆ ಗ್ರಾಮವಾಸ್ತವ್ಯ ಇದಾಗಿರುವುದಾಗಿ ಅವರು ಹೇಳಿದರು. ಮುಂದೆ ಉಡುಪಿಯಲ್ಲೂ ಗ್ರಾಮ ವಾಸ್ತವ್ಯ ಮಾಡಲಾಗುವುದು. ಮಾತ್ರವಲ್ಲದೆ ಜಿಲ್ಲೆಯ ಪ್ರತಿ ಹಾಡಿಗಳಲ್ಲೂ ವಾಸ್ತವ್ಯದ ಇಚ್ಛೆ ಇದೆ ಎಂದು ಅವರು ಹೇಳಿದರು.
ಪ್ರತಿ ತಿಂಗಳು ಪ್ರತಿ ಜಿಲ್ಲೆಯಲ್ಲೂ ಆದಿವಾಸಿ ಸಭೆಯನ್ನು ನಡೆಸುವ ಮೂಲಕ ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯಕ್ರಮ ತಮ್ಮದು ಎಂದರು.
ಕೊರಗ ಸಮುದಾಯ ಶಿಕ್ಷಣದಲ್ಲಿ ಹಿಂದುಳಿದಿದ್ದು, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕು ಎಂದರು. ಸಮುದಾಯದ ಪ್ರತಿನಿಧಿಗಳು ರಾಜಕೀಯ ಹಾಗೂ ಆಡಳಿತ ಕ್ಷೇತ್ರದಲ್ಲೂ ಅಧಿಕಾರ ಪಡೆಯಬೇಕೆಂದು ಅವರು ಸಲಹೆ ನೀಡಿದರು.
ವೇದಿಕೆಯಲ್ಲಿ ಕೊರಗ ಸಮುದಾಯದ ಹಿರಿಯ ಮುಖಂಡ ಗೋಕುಲ್‌ದಾಸ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಉಪ ಮೇಯರ್ ಸುಮಿತ್ರ ಕರಿಯ, ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್, ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿಯುಸ್ ರಾಡ್ರಿಗಸ್, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಸಂತೋಷ್ ಕುಮಾರ್, ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಹೇಮಲತಾ ಬಿ.ಎಸ್., ಸಹಾಯಕ ಆಯುಕ್ತ ಡಾ. ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತಿಸಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಜಿಲ್ಲೆಯ ಪರಿಶಿಷ್ಟ ಪಂಗಡದ ಕೊರಗ, ಮಲೆಕುಡಿ ಹಾಗೂ ಮರಾಟಿ ಜನಾಂಗದವರ ವಿವಿಧ ಬೇಡಿಕೆಗಳನ್ನು ಪ್ರಸ್ತಾವಿಸಿದರು.
ದ.ಕ. ಜಿಲ್ಲೆಯಲ್ಲಿ 82000 ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿದ್ದು, ಅವರಲ್ಲಿ ಮರಾಠಿ ಸಮುದಾಯದ 70,000, ಮಲೆಕುಡಿಯ ಸುಮಾರು 7500 ಹಾಗೂ ಕೊರಗ ಸಮುದಾಯದ ಜನಸಂಖ್ಯೆ 4800 ಎಂದು ಅವರು ಹೇಳಿದರು.
ಮುಹಮ್ಮದ್ ಪೀರ್ ಯೋಜನೆಯಂತೆ ಸಾಮಾನ್ಯ ಕೃಷಿ ಜಮೀನಿಗೆ ಬೇಡಿಕೆ, ಸಾಮೂಹಿಕ ಕೃಷಿ ಜಮೀನು ಮಂಜೂರು, ನಶಿಸುತ್ತಿರುವ ಮರಾಟಿ ಭಾಷೆಯನ್ನು ಉಳಿಸುವುದು, ಡಿಸಿ ಮನ್ನಾ ಜಮೀನು ಮಂಜೂರಾತಿ, ಕೊರಗ ಆರೋಗ್ಯ ಸಮೀಕ್ಷೆ, ಪೊಲೀಸ್ ಇಲಾಖೆಯಲ್ಲಿ ನೇಮಕಾತಿಯ ವೇಳೆ ಅಭ್ಯರ್ಥಿಗಳ ಎತ್ತರ ಮತ್ತು ತೂಕದಲ್ಲಿ ಪರಿಶಿಷ್ಟ ಪಂಗಡದವರಿಗೆ ರಿಯಾಯಿತಿ ಒದಗಿಸುವುದು, ಸಮುದಾಯ ಭವನ ನಿರ್ಮಾಣಕ್ಕೆ 12 ಲಕ್ಷ ರೂ. ಅನುದಾನವನ್ನು 25 ಲಕ್ಷ ರೂ.ಗಳಿಗೆ ನಿಗದಿಪಡಿಸುವುದು, ಸ್ವ ಉದ್ಯೋಗದಲ್ಲಿ ಮನಪಾದಿಂದ ಕಾಯ್ದಿರಿಸಿರುವ ಮಳಿಗೆಗಳಲ್ಲಿ 6 ಲಕ್ಷ ರೂ.ವರೆಗೆ ಠೇವಣಿ ರಿಯಾಯಿತಿ ನೀಡುವುದು ಮೊದಲಾದ ಹಲವಾರು ಬೇಡಿಕೆಗಳನ್ನು ಸಮುದಾಯದವರು ಜಿಲ್ಲಾಡಳಿತದ ಮುಂದಿಟ್ಟಿರುವುದಾಗಿ ಅವರು ಹೇಳಿದರು.
ಹೆಚ್ಚುವರಿ ಕುಮ್ಕಿ ಭೂಮಿ ಸ್ವಾಧೀನಪಡಿಸಿ ಅರ್ಹರಿಗೆ ವಿತರಿಸಿ: ಸಚಿವ ರೈ
ಸಚಿವ ಆಂಜನೇಯ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಕೊರಗರ ಸಾಂಪ್ರದಾಯಿಕ ಡೋಲು ಬಾರಿಸುವ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಜಿಲ್ಲೆಯಲ್ಲಿ ಹೆಚ್ಚುವರಿ ಕುಮ್ಕಿ ಭೂಮಿಯನ್ನು ಹೊಂದಿರುವವರಿಂದ ಅದನ್ನು ಸ್ವಾಧೀನ ಪಡಿಸಿಕೊಂಡು ಭೂರಹಿತ ಬಡವರಿಗೆ ಹಾಗೂ ನಿವೃತ್ತ ಯೋಧರಿಗೆ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಕುಮ್ಕಿದಾರನಿಗೆ ಮತ್ತಷ್ಟು ಕುಮ್ಕಿ ಭೂಮಿಯನ್ನು ನೀಡಲು ಮುಂದಾಗುವ ಬದಲು ಅಧಿಕಾರಿಗಳು ಕುಮ್ಕಿ ಭೂಮಿಯಲ್ಲಿ ನೆಲೆಸಿರುವ ಭೂ ರಹಿತರಿಗೆ ಕುಮ್ಕಿ ಹಕ್ಕನ್ನು ನೀಡಲು ಮುಂದಾಗಬೇಕು ಎಂದು ಹೇಳಿದ ಸಚಿವ ರೈ, ಡಿಸಿ ಮನ್ನಾ ಜಾಗಕ್ಕೆ ಸಂಬಂಧಿಸಿ ಬಂದಿರುವ ಅರ್ಜಿಗಳನ್ನು ಕ್ಷಿಪ್ರ ವಿಲೇವಾರಿಗೂ ಅಧಿಕಾರಿಗಳು ಮುಂದಾಗಬೇಕು ಎಂದರು.
ಕೆಳಸ್ತರದ ಅಧಿಕಾರಿಗಳು ಜನರ ಜತೆ ಕೆಲಸ ಮಾಡುವವರಲ್ಲದೆ, ಅವರೂ ಬಡವರ ಮನೆ ಮಕ್ಕಳು.ಹಾಗಾಗಿ ಅಂತಹವರಿಂದ ಬಡವರಿಗೆ ಅನ್ಯಾಯ ಆಗಬಾರದು. ಅಧಿಕಾರಿಗಳು ಇಚ್ಛಾಶಕ್ತಿಯೊಂದಿಗೆ ಕೆಲಸ ಮಾಡಿದಾಗ ದುರ್ಬಲ ವರ್ಗಗಳ ಸಮಸ್ಯೆಗಳು ಪರಿಹಾರವಾಗಲು ಸಾಧ್ಯವಾಗುತ್ತದೆ ಎಂದು ಸಚಿವ ರೈ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಇಂದು ವಿಶೇಷ ಯೋಜನೆ ಪ್ರಕಟ
ಕೊರಗ ಸಮುದಾಯದ ಪ್ರತಿನಿಧಿಗಳಿಂದ ಇಂದು ಸಮುದಾಯದ ಸಮಸ್ಯೆಗಳ ಅಹವಾಲು, ಬೇಡಿಕೆಗಳನ್ನು ಸ್ವೀಕರಿಸುವುದಲ್ಲದೆ, ಅವರ ಜತೆ ಸಂವಾದ ನಡೆಸಿದ ಅಗತ್ಯ ಬೇಡಿಕೆಗಳನ್ನು ಪರಿಗಣಿಸಿ ನಾಳೆ (ಎ. 16)ಬೆಳಗ್ಗೆ ಹಾಡಿಗೆ ವಿಶೇಷ ಯೋಜನೆಗಳನ್ನು ಪ್ರಕಟಿಸುವುದಾಗಿ ಸಚಿವ ಆಂಜನೇಯ ತಿಳಿಸಿದರು.