ಕಾರ್ಕಳ : ಮೂಡನಂಬಿಕೆ ಹೊಗಲಾಡಿಸುವಲ್ಲಿ ಶಿಕ್ಷಣದ ಪಾತ್ರ ಅನನ್ಯವಾದುದು. -ಸೊರಕೆ
ಕಾರ್ಕಳ : ಬಡತನ, ಅಜ್ಞಾನ ಮತ್ತು ಮೂಡನಂಬಿಕೆ ಹೊಗಲಾಡಿಸುವಲ್ಲಿ ಶಿಕ್ಷಣದ ಪಾತ್ರ ಅನನ್ಯವಾದುದು. ಪ್ರತಿಭೆ ಅನಾವರಣಕ್ಕೆ ಶಿಸ್ತುಬದ್ದ ಶಿಕ್ಷಣ ಅತ್ಯಅಗತ್ಯ ಎಂದು ರಾಜ್ಯ ನಗರಾಭಿವೃದ್ದಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಗುರುವಾರ ಗಾಂಧಿಮೈದಾನದಲ್ಲಿ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ರಜತಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ನಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂದಿದ್ದಾರೆ. ಅಮೇರಿಕಾದ ಅಧ್ಯಕ್ಷ ಒಬಮಾ ಅವರು 2020ರಲ್ಲಿ ಭಾರತವು ಶಿಕ್ಷಣ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲಿದೆ ಎಂದಿದ್ದು, ಅವೆಲ್ಲ ನೆರವೇರಬೇಕಾದರೆ ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ಅರಳಿಸುವ ಪರಿಪೂರ್ಣ ಶಿಕ್ಷಣ ಬೇಕಾಗಿದೆ ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅಪಾರವಾದುದು. ಉಭಯ ಜಿಲ್ಲೆಗಳ ಜನತೆ ಶಿಕ್ಷಣ ಪಡೆದವರು, ಬುದ್ದಿವಂತರು ಎನಿಸಿಕೊಳ್ಳುವಲ್ಲಿ ಕ್ಯಾಥೋಲಿಕ ಸಂಸ್ಥೆಯ ಪಾತ್ರಗಳು ಕೂಡಾ ಇವೆ. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ, ಸಿಇಟಿಯಲ್ಲಿ ನಮ್ಮೆರಡು ಜಿಲ್ಲೆಗಳ ವಿದ್ಯಾರ್ಥಿಗಳು ನಡೆಸಿದ ಸಾಧನೆಯಿಂದ ನಾವಿಂದು ರಾಜ್ಯದಲ್ಲಿ ಮುಂಚೂಣಿ ಸ್ಥಾನವನ್ನು ಪಡೆದಿದ್ದೇವೆ ಎಂದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಮಹಮ್ಮದ್ ಮಸೂದ್ ಉದ್ಘಾಟಿಸಿ ಮಾತನಾಡಿ, ಇಲ್ಲಿ ಜಾತಿ, ಮತ, ಧರ್ಮದ ಭೇದವಿಲ್ಲ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯುವ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಜನ ಈ ಸಂಸ್ಥೆಯತ್ತಾ ಆಕರ್ಷೀತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಈ ಸಂಸ್ಥೆಗೆ ನಿರಂತರ ಯಶಸ್ಸು ಸಿಗಲಿ ಎಂದು ಹಾರೈಸಿದರು. ರಾಜ್ಯ ಮೀನುಗಾರಿಕೆ ಮತ್ತು ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಗುಣಾತ್ಮಕ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಸಾಧ್ಯವಾಗಿದ್ದು, ಆ ನಿಟ್ಟಿನಲ್ಲಿ ಸಕಲ ಸೌಲಭ್ಯಗಳೊಂದಿಗೆ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು. ಕ್ರೈಸ್ಟ್‌ಕಿಂಗ್ ಚರ್ಚ್‌ನ ಧರ್ಮಗುರುಗಳಾದ ರೆ.ಫಾ.ಜೊಸ್ವಿ ಫೆರ್ನಾಂಡೀಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಎಂದರೆ ವಿದ್ಯೆ ಮಾತ್ರವಲ್ಲ. ಜೀವನದ ಮೌಲ್ಯಗಳನ್ನು ತಿಳಿ ಹೇಳುವ ಶಿಕ್ಷಣ ಕೂಡಾ ಬೇಕಾಗಿದೆ. ಶಿಕ್ಷಣವನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಮೌಲ್ಯಧಾರಿತ ಶಿಕ್ಷಣದಿಂದ ಅರಿಷಡ್ವರಿಗಳನ್ನು ಜಯಿಸಬಹುವುದು ಎಂದರು. ವೇದಿಕೆಯಲ್ಲಿ ಸಮಿತಿಯ ಕಾರ್ಯದರ್ಶಿ ಆರ್.ಅವೆಲಿನ್ ಲೂಯಿಸ್, ಸದಸ್ಯರಾದ ಪೀಟರ್ ಫೆರ್ನಾಂಡೀಸ್, ವಾಲ್ಟರ್ ಡಿಸೋಜಾ, ರಿಚರ್ಡ್ ಮಿರಾಂಡ, ಜೋನ್ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ನಾರಾಯಣ ಶೇಡಿಕಜೆ ಸ್ವಾಗತಿಸಿದರು, ರೇಖಾ ಸಂತೋಷ್ ಮತ್ತು ದಿವ್ಯಾ ಶುಭದ ರಾವ್ ಕಾರ್ಯಕ್ರಮ ನಿರೂಪಿಸಿದರು, ಸಿಸ್ಟರ್ ಮೆಡೋನಾ ವಂದಿಸಿದರು. ಪೊಟೋಕ್ಯಾಪ್ಶನ್ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿದರು.