×
Ad

ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ವಿಜಯ ಮಲ್ಯ ಪಾಸ್‌ಪೋರ್ಟ್ ಅಮಾನತು

Update: 2016-04-15 19:09 IST

ಹೊಸದಿಲ್ಲಿ,ಎ.15: ಬ್ಯಾಂಕುಗಳಿಗೆ ಸಾವಿರಾರು ಕೋ.ರೂ.ಸಾಲವನ್ನು ಬಾಕಿಯಿರಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯ ದೊರೆ ವಿಜಯ ಮಲ್ಯ ಅವರ ಪಾಸ್‌ಪೋರ್ಟ್‌ನ್ನು ಜಾರಿ ನಿರ್ದೇಶನಾಲಯ(ಇಡಿ)ದ ಸಲಹೆಯ ಮೇರೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಮಾನತುಗೊಳಿಸಿದೆ.

ಇಡಿ ಮೂರು ಬಾರಿ ಸಮನ್ಸ್ ಹೊರಡಿಸಿದ್ದರೂ ಅದರೆದುರು ಹಾಜರಾಗುವಲ್ಲಿ ಮಲ್ಯ ವಿಫಲರಾಗಿದ್ದರು. ತನಿಖೆಗೆ ಅವರು ಸಹಕರಿಸುತ್ತಿಲ್ಲವಾದ್ದರಿಂದ ಅವರ ಪಾಸ್‌ಪೋರ್ಟ್‌ನ್ನು ರದ್ದುಗೊಳಿಸುವಂತೆ ಇಡಿ ಕೋರಿಕೊಂಡಿತ್ತು.

900 ಕೋ.ರೂ.ಗೂ ಅಧಿಕ ಐಡಿಬಿಐ ಸಾಲ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಮಲ್ಯ ಅವರು ಶನಿವಾರ ಮುಂಬೈನಲ್ಲಿ ಇಡಿಯ ತನಿಖಾ ತಂಡದೆದುರು ಹಾಜರಾಗಬೇಕಾಗಿತ್ತು.

ಸಿಬಿಐ ಕಳೆದ ವರ್ಷ ದಾಖಲಿಸಿಕೊಂಡಿರುವ ಎಫ್‌ಐಆರ್‌ನ ಆಧಾರದಲ್ಲಿ ಮಲ್ಯ ಮತ್ತು ಇತರರ ವಿರುದ್ಧ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಹಣಕಾಸು ಸ್ವರೂಪದ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ,ಸಾಲ ಪಡೆಯಲು ಅದು ಕಮಿಷನ್ ನೀಡಿತ್ತೇ ಎನ್ನುವುದನ್ನೂ ಪರಿಶೀಲಿಸುತ್ತಿದೆ.

 ಮಾ.18ರಂದು ಮುಂಬೈನ ತನ್ನ ಕಚೇರಿಯಲ್ಲಿ ಖುದ್ದಾಗಿ ಹಾಜರಾಗುವಂತೆ ಮಲ್ಯಗೆ ಮೊದಲ ಸಮನ್ಸ್‌ನ್ನು ಇಡಿ ಜಾರಿಗೊಳಿಸಿತ್ತು. ಮಲ್ಯ ಕಾಲಾವಕಾಶ ಕೋರಿದ ಬಳಿಕ ಎ.2ರಂದು ಹಾಜರಾಗುವಂತೆ ಸೂಚಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News