ಮುಲ್ಕಿ: ಬಾವಿಗೆ ಇಳಿದವನನ್ನು ರಕ್ಷಿಸಲು ತೆರಳಿದ್ದ ಮೂವರು ಸಹಿತ ನಾಲ್ಕು ಮಂದಿ ಅಸ್ವಸ್ಥ
ಮುಲ್ಕಿ, ಎ. 15: ಬಾವಿಯೊಳಗಿದ್ದ ಪಂಪ್ ರಿಪೇರಿಗೆಂದು ಇಳಿದಿದ್ದ ಓರ್ವರನ್ನು ರಕ್ಷಿಸಲು ತೆರಳಿದ್ದ ಮೂವರು ಸೇರಿ ಒಟ್ಟು ನಾಲ್ಕು ಮಂದಿ ಅಸ್ವಸ್ಥಗೊಂಡ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯ ಕಾಪಿಕಾಡು ಅತ್ತೂರು ಎಂಬಲ್ಲಿ ನಡೆದಿದೆ.
ಅಸ್ವಸ್ಥಗೊಂಡವರನ್ನು ಕಾಪಿಕಾಡು ಅತ್ತೂರು ನಿವಾಸಿಗಳಾದ ಮುಹಮ್ಮದ್ ಕುಞ್ಞೆ ಎಂಬವರ ಮಕ್ಕಲಾದ ಮುನೀರ್, ಅಬ್ದುಲ್ ನಝೀರ್ ಮತ್ತು ನೆರೆ ಮನೆಯ ಮುಹಮ್ಮದ್ ಮತ್ತು ಪೂವಪ್ಪ ಎಂದು ತಿಳಿದು ಬಂದಿದೆ.
ಕಾಪಿಕಾಡು ಅತ್ತೂರು ಕಾಪಿಕಾಡು ನಿವಾಸಿ ಮುಹಮ್ಮದ್ ಕುಞ್ಞೆ ಎಂಬವರರು ತನ್ನ ಮನೆಯ ಸುಮಾರು 50 ಅಡಿ ಆಳದ ಬಾವಿಯ ಪಂಪ್ ರಿಪೇರಿಗೆಂದು ಬಾವಿಗೆ ಇಳಿದಿದ್ದ ವೇಳೆ ಉಸಿರು ಗಟ್ಟಿ ಅಸ್ವಸ್ಥರಾಗಿದ್ದರು. ಸದನ್ನು ಕಂಡ ಅವರ ಮಕ್ಕಳಾದ ಮುನೀರ್, ಅಬ್ದುಲ್ ನಝೀರ್ ತಂದೆಯನ್ನು ಮೇಲೆತ್ತಲು ಬಾವಿಗೆ ಇಳಿದರಾದರೂ ಅವರಿಗೂ ಬಾವಿಯೊಳಗೆ ಆಮ್ಲಜನಕದ ಕೊರೆತೆಯಿಂದ ಉಸಿರುಗಟ್ಟಿ ಅಲ್ಲೇ ಉಳಿಯುವಂತಾಗಿತ್ತು. ಮುಹಮ್ಮದ್ ಮತ್ತು ಅವರ ಮಕ್ಕಳನ್ನು ಮೇಲೆತ್ತಲು ತೆರಳಿದ ಸ್ಥಳೀಯರಾದ ಪೂವಪ್ಪ ಎಂಬವರೂ ಆಮ್ಲಜನಕದ ಕೊರತೆಯಿಂದಾಗಿ ಉಸಿರಾಡಲಾಗದೆ ಬಾವಿಯಲ್ಲಿ ಉಳಿಯುವಂತಾಯಿತು ಎಂದು ತಿಳಿದು ಬಂದಿದೆ.
ತಕ್ಷಣ ಅಗ್ನಿಶಾಮಕ ಕಚೇರಿಗೆ ಫೋನಾಯಿಸಿ ಘಟನೆ ತಿಳಿಸಿದ್ದ ಸ್ಥಳೀಯರು, ಮುಲ್ಕಿ ಪೊಲೀಸರು ಅವರು ಬರುವ ವರೆಗೆ ಮೇಲೆತ್ತುವ ಎಲ್ಲಾ ಪ್ರಯತ್ನಗಳನ್ನು ನಡೆಸಿದರಾದರೂ ಫಲ ನೀಡಿಲ್ಲ. ಬಳಿ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಸ್ಥಳೀಯರು ಹಾಗೂ ಮುಲ್ಕಿ ಪೊಲೀಸರು ಕೈಜೋಡಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಬಾವಿಯೊಳಗಿದ್ದ ನಾಲ್ವರನ್ನೂ ಮೇಲೆತ್ತಲಾಯಿತು.
ಘಟನೆಯಿಂದ ಮುನೀರ್, ಅಬ್ದುಲ್ ನಝೀರ್ ಮತ್ತು ಮುಹಮ್ಮದ್ ಅಲ್ಪ ಪ್ರಮಾಣದಲ್ಲಿ ಅಸ್ವಸ್ಥರಾಗಿದ್ದರೆ ಪೂವಪ್ಪ ತೀರಾ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಡವಾಗಿ ಬಂದ ಅಗ್ನಿಶಾಮಕದಳ:
ಎಂದಿನಂತೆಯೇ ಹಳೆಯಂಗಡಿ, ಕಿನ್ನಿಗೋಳಿ, ಮುಲ್ಕಿ ಭಾಗದಲ್ಲಿ ಯಾವುದೇ ಅವಘಡಗಳು ಸಂಭವಿಸಿದರೂ ಮಂಗಳೂರಿನ ಅಗ್ನಿಶಾಮಕ ಸಿಬ್ಬಂದಿಗಾಗಿ ಕಾಯುವ ಪರಿಪಾಠ ಹಿಂದಿನಿಂದಲೂ ಇದೆ. ಮುಲ್ಕಿಯಲ್ಲಿ ಗ್ನಿಶಾಮಕ ಕಚೇರಿ ಸ್ಥಾಪಿಸುವಂತೆ ಜನತೆ ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿದ್ದಾರಾದರೂ ಅದು ಬೇಡಿಕೆಯಾಗಿಯೇ ಉಳಿದಿದದೆ.
ಈ ಭಾಗದ ಎಲ್ಲಾ ದುರ್ಘಟನೆಗಳ ಸಂದರ್ಭ ತಡವಗಿ ಬರುವ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪುವಾಗ ದುರ್ಘಟನೆ ನಡೆದು ಪ್ರಾಣಿಹಾನಿಸಂಭವಿಸಿರುವ ಘಟನೆಗಳೇ ಹೆಚ್ಚು ಎಮದಿರುವ ಸ್ಥಳೀಯರು ಶೀಘ್ರ ಮುಲ್ಕಿ ಯಲ್ಲಿ ಅಗ್ನಿಶಾಮಕ ಕಚೇರಿ ತೆರೆದು ಸೇವೆ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.