ತ್ರಯಂಬಕೇಶ್ವರ ದೇವಳ ಪ್ರವೇಶಕ್ಕೆ ಷರತ್ತು ನಿರಾಕರಿಸಿದ ಮಹಿಳಾ ಕಾರ್ಯಕರ್ತರಿಂದ ದೂರು ದಾಖಲು

Update: 2016-04-15 13:56 GMT

 ನಾಸಿಕ್,ಎ.15: ಪ್ರತಿ ದಿನ ಬೆಳಿಗ್ಗೆ 6ರಿಂದ 7ರವರೆಗೆ ಒಂದು ಗಂಟೆ ಕಾಲ ಮಹಿಳೆಯರಿಗೆ ಶಿವ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಿಸಲು ಅವಕಾಶ ನೀಡಲು ತ್ರಯಂಬಕೇಶ್ವರ ದೇವಸ್ಥಾನ ಟ್ರಸ್ಟ್ ನಿರ್ಧರಿಸಿದೆ,ಆದರೆ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸುವಾಗ ಅವರು ಒದ್ದೆಯಾದ ಹತ್ತಿ ಅಥವಾ ರೇಷ್ಮೆಯ ಬಟ್ಟೆಗಳನ್ನು ಧರಿಸಿರಬೇಕು ಎಂದು ಷರತ್ತು ವಿಧಿಸಿದೆ.

ಈ ಷರತ್ತನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಮಹಿಳಾ ಕಾರ್ಯಕರ್ತರು ಪೊಲೀಸ್ ದೂರನ್ನು ದಾಖಲಿಸಿದ್ದಾರೆ.

ಟ್ರಸ್ಟ್ ಬುಧವಾರ ತನ್ನ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದು, ಗುರುವಾರದಿಂದ ಜಾರಿಗೆ ಬರಲಿತ್ತು ಎಂದು ಟ್ರಸ್ಟಿಗಳಲ್ಲೋರ್ವರಾದ ಲಲಿತಾ ಶಿಂದೆ ತಿಳಿಸಿದರು.

ವನಿತಾ ಗುತ್ತೆ ನೇತೃತ್ವದ ಪುಣೆಯ ಸ್ವರಾಜ್ಯ ಸಂಘಟನಾದ ಪ್ರತಿಭಟನೆಯ ಬಳಿಕ ಟ್ರಸ್ಟ್ ಈ ನಿರ್ಧಾರನ್ನು ಕೈಗೊಂಡಿದೆ.

ಆದರೆ ಗುರುವಾರ ಬೆಳಿಗ್ಗೆ ಒದ್ದೆಬಟ್ಟೆಗಳಲ್ಲಿ ಗರ್ಭಗುಡಿಯನ್ನು ಪ್ರವೇಶಿಸಲು ನಿರಾಕರಿಸಿದ ಗುತ್ತೆ ಮತ್ತು ಇತರ ಕಾರ್ಯಕರ್ತರು ಈ ನಿಯಮದ ಬಗ್ಗೆ ಸ್ಥಳೀಯ ಅರ್ಚಕರೊಂದಿಗೆ ವಾದಕ್ಕಿಳಿದಿದ್ದರು. ಬಳಿಕ ಪೊಲೀಸ್‌ರಲ್ಲಿ ದೂರು ಸಲ್ಲಿಸಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ದೇವಸ್ಥಾನದ ಟ್ರಸ್ಟ್‌ನ ಸದಸ್ಯರು,ಕೆಲವು ಸ್ಥಳೀಯ ಅರ್ಚಕರು ಮತ್ತು ದೇವಸ್ಥಾನದ ನೌಕರರು ಸೇರಿದಂತೆ ಸುಮಾರು 250 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News