ಇನ್ನೂ 9 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ

Update: 2016-04-15 18:20 GMT

ಹೊಸದಿಲ್ಲಿ,ಎ.15: ಭಾರತೀಯ ರೈಲ್ವೆಯ ಟೆಲಿಕಾಂ ಘಟಕವಾದ ರೈಲ್‌ಟೆಲ್,ಶುಕ್ರವಾರ ದೇಶಾದ್ಯಂತ ಇನ್ನೂ 9 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆಯನ್ನು ಆರಂಭಿಸಿದೆ. ಇದರೊಂದಿಗೆ ದೇಶಾದ್ಯಂತ ಅಧಿಕ ವೇಗದ ಇಂಟರ್‌ನೆಟ್ ಸೇವೆ ಲಭ್ಯವಿರುವ ರೈಲು ನಿಲ್ದಾಣಗಳ ಸಂಖ್ಯೆ 10ಕ್ಕೇರಿದ್ದು, ಸುಮಾರು 10.50 ಲಕ್ಷ ಪ್ರಯಾಣಿಕರು ಹಾಗೂ ಸಂದರ್ಶಕರು ಪ್ರಯೋಜನ ಪಡೆಯಲಿದ್ದಾರೆ.
  ಈ ವರ್ಷದ ಜನವರಿಯಲ್ಲಿ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಗೂಗಲ್-ರೈಲ್‌ಟೆಲ್‌ನ ವೈಫೈ ಸೇವೆ ಆರಂಭಗೊಂಡಿತ್ತು. ಹೊಸದಾಗಿ ವೈಫೈ ಸೇವೆ ಲಭ್ಯವಿರುವ ರೈಲು ನಿಲ್ದಾಣಗಳಲ್ಲಿ ಪುಣೆ, ಭುವನೇಶ್ವರ ಹಾಗೂ ರಾಂಚಿ ಒಳಗೊಂಡಿವೆ. ಜೈಪುರ, ಉಜ್ಜಯಿನಿ ಹಾಗೂ ಅಲಹಾಬಾದ್‌ನಲ್ಲಿ ಮುಂದಿನ ವಾರ ವೈಫೈ ಸೇವೆ ದೊರೆಯಲಿದೆ. ''ಪ್ರಸ್ತುತ ದೇಶಾದ್ಯಂತ 10 ಪ್ರಮುಖ ರೈಲು ನಿಲ್ದಾಣಗಳಲ್ಲಿ ವೈಫೈ ಇಂಟರ್‌ನೆಟ್ ಜಾಲ ಸಕ್ರಿಯವಾಗಿದೆ. ಮುಂದಿನ ದಿನಗಳಲ್ಲಿ ಸಣ್ಣ ರೈಲು ನಿಲ್ದಾಣಗಳಿಗೂ ವೈಫೈ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ತೀವ್ರವಾಗಿ ಪ್ರಯತ್ನಿಸಲಾಗುವುದೆಂದು ಗೂಗಲ್ ಇಂಡಿಯಾದ ಯೋಜನಾ ಸಂಪರ್ಕಾಧಿಕಾರಿ ಗುಲ್ಝಾರ್ ಆಝಾದ್ ತಿಳಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಶೀಘ್ರದಲ್ಲೇ ಈ ಸೇವೆಯನ್ನು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆಂದು ಅವರು ಹೇಳಿದರು. ಇಂದಿನಿಂದ ಪುಣೆ,ಭುವನೇಶ್ವರ, ಭೋಪಾಲ್, ರಾಂಚಿ, ರಾಯ್‌ಪುರ, ವಿಜಯವಾಡ, ಕಾಚೆಗುಡ (ಹೈದರಾಬಾದ್), ಎರ್ನಾಕುಲಂ ಜಂಕ್ಷನ್ (ಕೊಚ್ಚಿ) ಹಾಗೂ ವಿಶಾಖಪಟ್ಟಣಂ ರೈಲು ನಿಲ್ದಾಣಗಳಲ್ಲಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ವೈಫೈ ಸೇವೆಯನ್ನು ಉಚಿತವಾಗಿ ಪಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News