ವೇಗ ಪಡೆದುಕೊಂಡ ‘ಆಪರೇಷನ್ ಮೆಲ್ಕಾರ್’ ಕಾಮಗಾರಿ

Update: 2016-04-15 18:21 GMT

ವಿಟ್ಲ, ಎ.15: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಜಂಕ್ಷನ್‌ನಲ್ಲಿ ಆಪರೇಶನ್ ಮೆಲ್ಕಾರ್ ಕಾಮಗಾರಿಯು ಟ್ರಾಫಿಕ್ ಎಸೈ ಚಂದ್ರಶೇಖರಯ್ಯರ ನೇತೃತ್ವದಲ್ಲಿ ಮತ್ತಷ್ಟು ವೇಗ ಪಡೆದುಕೊಂಡು ಮುಂದುವರಿದಿದೆ.

 ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯನವರ ದಿಟ್ಟ ಕ್ರಮದಿಂದಾಗಿ ಮೆಲ್ಕಾರ್ ಪರಿಸರದ ಅನಧಿಕೃತ ಗೂಡಂಗಡಿ ಹಾಗೂ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿ ಹೆದ್ದಾರಿ ಅಗಲೀಕರಣ ನಡೆಸಿ ನಿತ್ಯದ ಟ್ರಾಫಿಕ್ ಜಾಂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿತ್ತು. ಆದರೆ ಹೆದ್ದಾರಿಯ ಎರಡೂ ಬದಿ ಅಗಲೀಕರಣಗೊಂಡ ಪರಿಣಾಮ ಪರಿಸರದಲ್ಲಿ ಧೂಳಿನ ಸಮಸ್ಯೆ ಉಂಟಾಗಿತ್ತು. ಅಲ್ಲದೆ ಮೆಸ್ಕಾಂ ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳು ಹೆದ್ದಾರಿಯ ಮಧ್ಯಭಾಗದಲ್ಲೇ ಇತ್ತು. ಜೊತೆಗೆ ಪುರಸಭೆಯ ನಿರ್ಲಕ್ಷ್ಯದಿಂದಾಗಿ ಐಶಾರಾಮಿ ಕಟ್ಟಡಗಳ ಕೊಳಚೆ ನೀರು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗೆ ಹರಿದು ದುರ್ನಾತ ಬೀರುತ್ತಿತ್ತು. ಈ ಎಲ್ಲ ಸಮಸ್ಯೆಗಳ ಬಗ್ಗೆ ಇಲ್ಲಿನ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಇತ್ತೀಚೆಗೆ ಸ್ವತಃ ಪರಿಶೀಲನೆ ನಡೆಸಿ ಶೀಘ್ರ ಸಮಸ್ಯೆ ಪರಿಹರಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದರು.

ಶುಕ್ರವಾರ ಮಧ್ಯಾಹ್ನ ಮೆಲ್ಕಾರ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಹಾಗೂ ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್‌ನೇರ ಮಾರ್ಗದರ್ಶನದಲ್ಲಿ ಬೃಹತ್ ಕ್ರೇನ್ ಹಾಗೂ ಯಂತ್ರಗಳನ್ನು ಬಳಸಿ ಮೆಲ್ಕಾರ್ ಜಂಕ್ಷನ್‌ನ ರಸ್ತೆ ಬದಿಯ ಎಲ್ಲ್ಲ ವಿದ್ಯುತ್ ಕಂಬಗಳನ್ನು ಕ್ಷಣ ಮಾತ್ರದಲ್ಲಿ ತೆರವುಗೊಳಿಸಿ, ನೂತನ ಕಂಬಗಳನ್ನು ಅಳವಡಿಸಲಾಯಿತು.

 ಈ ಸಂದರ್ಭ ಸ್ಥಳೀಯ ಪುರಸಭಾ ನಾಮನಿರ್ದೇಶಿತ ಸದಸ್ಯ ಅಬೂಬಕರ್ ಸಿದ್ದೀಕ್ ಗುಡ್ಡೆ ಅಂಗಡಿ ಹಾಗೂ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಸೂಕ್ತ ಸಲಹೆ ನೀಡಿ ಸಹಕರಿಸಿದರು. ಆದರೆ ಇಲ್ಲಿನ ಚುನಾಯಿತ ಪುರಸಭಾ ಸದಸ್ಯರು ಕಾರ್ಯಾಚರಣೆ ವೇಳೆ ಗೈರಾಗಿದ್ದು, ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಇಲ್ಲದೇ ಇರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ರೈ ಸೂಚನೆಯಂತೆ ಮೆಲ್ಕಾರ್ ಜಂಕ್ಷನ್‌ನಲ್ಲಿ ಅಗಲೀಕರಣಗೊಂಡ ಜಾಗಕ್ಕೆ ಹೆದ್ದಾರಿ ಇಲಾಖೆಯಿಂದ ಡಾಮರೀಕರಣ ಕಾಮಗಾರಿಯೂ ನಡೆಯುತ್ತಿದ್ದು, ಎಲ್ಲವೂ ಸುಸೂತ್ರವಾಗಿ ನಡೆದಲ್ಲಿ ಮೆಲ್ಕಾರ್ ಜಂಕ್ಷನ್‌ನ ಬಹುತೇಕ ಸಮಸ್ಯೆಗಳು ಪರಿಹಾರವಾಗಲಿದ್ದು, ಸಂಚಾರಿ ಪೊಲೀಸ್ ಅಧಿಕಾರಿಯ ಶ್ರಮವೂ ಸಾರ್ಥಕವಾಗಲಿದೆ ಎಂದು ಇಲ್ಲಿನ ನಾಗರಿಕರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News