ಒಂದು ಕುರಿಯನ್ನು ಉಳಿಸಲು ಬಾವಿಗಿಳಿದ ಮೂವರು ಉಸಿರು ಕಟ್ಟಿ ಸತ್ತರು!
ನಾಗ್ಲಾ ಬೀಚ್, ಎ. 16: ಬಾವಿಗೆ ಬಿದ್ದ ಕುರಿಯನ್ನು ಹೊರಗೆ ತೆಗೆಯುವ ಪ್ರಯತ್ನದಲ್ಲಿ ಮೂವರು ಮೃತರಾದ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.
ಬಾವಿಯೊಳಗಿದ್ದ ವಿಷಾನಿಲದಿಂದ ಈ ಮೂವರು ಗ್ರಾಮೀಣ ಯುವಕರು ಮೃತರಾದರೆನ್ನಲಾಗಿದೆ.
ಬಾವಿಗೆ ನೀರು ಹಾಯಿಸಿದ ನಂತರ ಮೂವರ ಮೃತದೇಹವನ್ನು ಹೊರತೆಗೆಯಲಾಗಿದ್ದು ಸಾವಿನಿಂದ ಶೋಕತಪ್ತ ಗ್ರಾಮೀಣರು ಕೋಲಾಹಲ ಸೃಷ್ಟಿಸಿದ್ದಲ್ಲದೆ ಪೊಲೀಸರು ಪೋಸ್ಟ್‌ಮಾರ್ಟಂಗೆ ಶವವನ್ನು ಸಾಗಿಸಲು ಮುಂದಾದಾಗ ಪರಿಹಾರದ ಬೇಡಿಕೆಯಿಟ್ಟು ತಡೆದ ಘಟನೆ ಥಾನಾ ನಾರ್ಕಿ ಗ್ರಾಮದ ಕುತಕಪುರದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸಿಂಟುಖಾನ್‌ರ ಹನ್ನೆರಡು ವರ್ಷದ ಪುತ್ರ ಅಮನ್ ಶುಕ್ರವಾರ ಕುರಿಗಳನ್ನು ಮೇಯಿಸಲು ಗ್ರಾಮದ ಹೊರಗೆ ಹೋಗಿದ್ದ. ಕುರಿಮೇಯಿಸಿದ ಬಳಿಕ ಸಂಜೆ ಆರುಗಂಟೆಗೆ ಮನೆಗೆ ಮರಳುತ್ತಿದ್ದಾಗ ಗ್ರಾಮದಲ್ಲಿದ್ದ 20 ಅಡಿಆಳದ ಬಾವಿಗೆ ಅವನ ಕುರಿ ಬಿದ್ದಿತ್ತು. ಕುರಿಯನ್ನು ಹೊರತೆಗೆಯಲು ಆತ ಮನೆಯಿಂದ ಹಗ್ಗ ತಂದು ಬಾವಿಗೆ ಇಳಿದಾಗ ಆಯ ತಪ್ಪಿ ಆತ ಕೆಳಗೆ ಬಿದ್ದ ಎನ್ನಲಾಗಿದೆ. ಆನಂತರ ಆತನ ಸಂಬಂಧಿ ಶೌಕೀನ್ ಖಾನ್ ಎಂಬ ಯುವಕ ಬಾವಿಗೆ ಇಳಿದಾಗ ಅವನು ಕೂಡ ಅರ್ಧದಿಂದಲೇ ಕೆಳಗೆ ಬಿದ್ದಿದ್ದ. ಅನಂತರ ಗ್ರಾಮದ ಜಾನಕಿ ಪ್ರಸಾದ್ ಎಂಬ ಯುವಕ ಬಾವಿಗಿಳಿದ ಅವನೂ ಬಾವಿಯಿಂದ ಹೊರಬರಲಿಲ್ಲ. ಗ್ರಾಮೀಣರು ಬಾವಿಗೆ ಟಾರ್ಚ್ ಹಾಕಿ ನೋಡಿದರು. ಜೋರಾಗಿ ಕೂಗಿ ನೋಡಿದರು. ಆದರೆ ಯಾವುದೇ ಉತ್ತರ ಕೇಳಿ ಬರಲಿಲ್ಲ. ಬಾವಿಯಲ್ಲಿ ವಿಷಾನಿಲ ತುಂಬಿದ್ದರಿಂದ ಯಾರು ಅದಕ್ಕೆ ಇಳಿಯಲು ಮುಂದಾಗಲಿಲ್ಲ. ಸ್ವಲ್ಪ ಸಮಯದನಂತರ ಬಾವಿಗೆ ಮೂರು ಸಬ್‌ಮರ್ಸಿಬಲ್ ಪಂಪ್‌ನಿಂದ ನೀರು ಹಾಯಿಸಿದರು. ಒಂದು ಗಂಟೆ ನೀರು ಹಾಯಿಸಿದಾಗ ಬಾವಿ ತುಂಬಿತು. ಅನಂತರ ಮೂವರ ಶವ ತೇಲಾಡಿ ಮೇಲೆ ಬಂತು. ಗ್ರಾಮೀಣರು ಅವರನ್ನು ವೈದ್ಯರ ಬಳಿಗೆ ಕರೆದೊಯ್ದಾಗ ಮೂವರನ್ನು ಮೃತರೆಂದು ಘೋಷಿಸಲಾಯಿತು. ಇದರಿಂದಾಗಿ ಗ್ರಾಮಸ್ಥರಲ್ಲಿ ಶೋಕ ಮಡುಗಟ್ಟಿದ್ದಲ್ಲದೆ ಕೋಲಾಹಲಕ್ಕೆ ಕಾರಣವಾಯಿತು.
ವಿಷಯ ತಿಳಿದ ಪೊಲೀಸರು ಪೋಸ್ಟ್‌ಮಾರ್ಟಂಗಾಗಿ ಶವವನ್ನು ಕಳುಹಿಸಲು ಪ್ರಯತ್ನಿಸಿದಾಗ ಗ್ರಾಮಸ್ಥರು ಅಡ್ಡಿಪಡಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಪೊಲೀಸಧಿಕಾರಿಗಳು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತೆಂದು ವರದಿಯಾಗಿದೆ.