ಆಕ್ರಮ ಮರಳುಗಾರಿಕೆ ತಡೆಗೆ ಒತ್ತಾಯ: ರೈತ ಸಂಘ, ಹಸಿರು ಸೇನೆ ಪ್ರತಿಭಟನೆ
ಪುತ್ತೂರು, ಎ. 16: ಮರಳು ಸಾಗಾಟದ ಕುರಿತು ಕಾನೂನು ನಿರ್ಬಂಧಗಳಿದ್ದರೂ ಜಿಲ್ಲೆಯಲ್ಲಿ ನಿರಂತರ ಅಕ್ರಮ ಮರಳು ಸಾಗಾಟ ನಡೆಸಲಾಗುತ್ತಿದ್ದು, ಈ ಅಕ್ರಮ ದಂಧೆಯ ವಿರುದ್ಧ ಜಿಲ್ಲಾಡಳಿತ ಕಡಿವಾಣ ಹಾಕದಿದ್ದಲ್ಲಿ ಮೇ ಒಂದರಿಂದ ಜಿಲ್ಲೆಯಾದ್ಯಂತ ರೈತ ಸಂಘದ ಕಾರ್ಯಕರ್ತರು ಬೀದಿಗಿಳಿದು ಸಾಗಾಟ ತಡೆ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಎಚ್ಚರಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಶನಿವಾರ ಪುತ್ತೂರಿನ ವಿಧಾನ ಸೌಧದ ಮುಂಭಾಗದಲ್ಲಿ ಅವರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಎಪ್ರಿಲ್ 16ರಿಂದ 30ರವರಗೆ ಜಿಲ್ಲೆಯ ನಾನಾ ಕಡೆ ಪ್ರತಿಭಟನಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ಅವಧಿಯಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮೇ 1ರಿಂದ ರೈತ ಸಂಘದ ಕಾರ್ಯಕರ್ತರೇ ರಂಗಕ್ಕಿಳಿದು ಗಡಿಗಳಲ್ಲಿ ಕಾವಲು ಕಾಯಲಿದ್ದಾರೆ. ಅಗತ್ಯ ಕಂಡಲ್ಲಿ ನಾಕಾಬಂದಿ ನಡೆಸಿ ಅಕ್ರಮ ಮರಳು ಸಾಗಾಟವನ್ನು ತಡೆ ಹಿಡಿಯಲಿದ್ದಾರೆ. ಇದರಿಂದ ಆಗುವ ಅನಾಹುತ ಮತ್ತು ಕಷ್ಟ ನಷ್ಟಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಜಿಲ್ಲೆಯಿಂದ ಹೊರಗೆ ಮರಳು ಹೋಗದಂತೆ ತಡೆಯಲು ಜಿಲ್ಲಾಡಳಿತವು ಮರಳು ತೆಗೆಯುವ ಸ್ಥಳದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಬೇಕು. ಮರಳು ಸಾಗಾಟ ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು, ಟೋಕನ್ ಪದ್ಧತಿ ಜಾರಿಗೆ ತರಬೇಕು, ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಗಡಿಭಾಗದಲ್ಲಿ ನಾಕಾಬಂದಿ ಮತ್ತು ಅರೆಸೇನಾ ತುಕಡಿ ಅಥವಾ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಬೇಕು, ದೂರದಿಂದಲೇ ಪತ್ತೆ ಹಚ್ಚುವ ಇಂಟರ್ ಸೆಪ್ಟರ್ ಮಾಪಕ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. 2007-08ರ ಅವಧಿಯಲ್ಲಿ ಒಂದು ಲೋಡು ಮರಳು ಒಂದೂವರೆಯಿಂದ ಎರಡು ಸಾವಿರ ರೂ.ಗಳಿಗೆ ಮನೆ ಬಾಗಿಲಿಗೆ ಬರುತ್ತಿತ್ತು. ಈಗ ಲೋಡಿಗೆ 20ರಿಂದ 25 ಸಾವಿರ ರೂ. ಮುಟ್ಟಿದೆ. ರಾಜ್ಯ ಸರಕಾರದ ಆಶ್ರಯ, ಇಂದಿರಾ ಆವಾಸ್, ಬಸವ ವಸತಿ ಯೋಜನೆಗಳಲ್ಲಿ ಮನೆ ಕಟ್ಟಲು ಆಗುತ್ತಿಲ್ಲ. ಯೋಜನೆಗಳು ಮೂಲೆಗುಂಪಾಗಿವೆ. ಕಟ್ಟಡ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಗುತ್ತಿಗೆದಾರರು ಯೋಜನೆಗಳನ್ನೇ ನಿಲ್ಲಿಸುವ ಸ್ಥಿತಿ ತಲುಪಿದ್ದಾರೆ. ಸರಕಾರದ ಯೋಜನೆಯಲ್ಲಿ ಮನೆ ಕಟ್ಟಲು ಸಿಗುವ 1,20,000 ರೂ. ಗಳ ಪೈಕಿ 80 ಶೇ. ಮೊತ್ತ ಕೇವಲ ಮರಳಿಗೆ ಹೋದರೆ ಉಳಿದ ಶೇ.20ರಲ್ಲಿ ಮನೆ ಕಟ್ಟಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದಕ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಡಿಲ ಈಶ್ವರ ಭಟ್, ಉಪಾಧ್ಯಕ್ಷ ದರ್ಣಪ್ಪ ಗೌಡ ಇಡ್ಯಾಡಿ, ಮುಖಂಡರಾದ ಚೆನ್ನಪ್ಪ ಗೌಡ ದೋಂತಿಲ, ವಸಂತ ಗೌಡ, ಶೇಖರ ರೈ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.