ಎ.24ರಂದು ಮೊಗರ್ಪಣೆ ಮಸೀದಿಯ ಖಾಝಿ ಸ್ವೀಕಾರ ಸಮಾರಂಭ
ಸುಳ್ಯ: ಮೊಗರ್ಪಣೆಯ ಮುಹಿಯ್ಯುದ್ದೀನ್ ಜುಮಾ ಮಸೀದಿ ಮತ್ತು ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಇದರ ಆಶ್ರಯದಲ್ಲಿ ಫಝಲ್ ಹಾಮಿದ್ ಕೋಯಮ್ಮ ತಂಙಳ್ ಅಲ್‌ಬುಕಾರಿ ಕೂರತ್‌ರವರಿಂದ ಖಾಝಿ ಸ್ವೀಕಾರ ಸಮಾರಂಭ ನಡೆಯಲಿದೆ. ಜಮಾಅತ್ ಅಧ್ಯಕ್ಷ ಅಬ್ದುಲ್ ರಶೀದ್ ಕಮ್ಮಾಡಿ ಹಾಗೂ ಕಾರ್ಯಕ್ರಮದ ಸಂಚಾಲಕ ಬಿ.ಎಸ್.ಶರೀಫ್ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಎ.24ರಂದು ಮೊಗರ್ಪಣೆ ಜುಮಾ ಮಸೀದಿ ವಠಾರದಲ್ಲಿ ಸಮಾರಂಭ ನಡೆಯಲಿದ್ದು, ಸಂಜೆ ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್‌ರವರ ವಾರ್ಷಿಕ ದಿಕ್ರ್ ಹಲ್ಖ ಕಾರ್ಯಕ್ರಮ ನಡೆಯಲಿದೆ. ಮಂಞಂಪ್ಪಾರ ಮಜ್ಲಿಸ್ ಅಧ್ಯಕ್ಷ ಶೈಖುನಾ ಮೊಹಮ್ಮದ್ ಅಶ್ರಫ್ ಸಖಾಫ್ ನೇತೃತ್ವ ವಹಿಸುವರು. ಬಳಿಕ ಖಾಝಿ ಸ್ವೀಕಾರ ನಡೆಯಲಿದ್ದು ಫಝಲ್ ಕೋಯಮ್ಮ ತಂಙಳ್ ಅಲ್‌ಬುಕಾರಿ ಕೂರತ್‌ರವರು ಖಾಝಿ ಸ್ಥಾನ ಸ್ವೀಕರಿಸಲಿದ್ದು, ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಖಾಝಿ ಸ್ಥಾನ ನೀಡಲಿದ್ದಾರೆ. ಬಳಿಕ ಧಾರ್ಮಿಕ ಪ್ರಭಾಷಣ ನಡೆಯಲಿದ್ದು, ಇಸ್ಲಾಮಿನಲ್ಲಿ ಖಾಝಿ ಪರಂಪರೆ ಮತ್ತು ಮಹತ್ವದ ಬಗ್ಗೆ ಅಬ್ದುಲ್ ವಹಾಬ್ ಸಖಾಫಿ ಮಂಬಾಡ್‌ರವರು ಮುಖ್ಯ ಭಾಷಣ ನೀಡಲಿದ್ದಾರೆ. ಸಮಾರಂಭದಲ್ಲಿ ವಿವಿಧ ಧಾರ್ಮಿಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಕೆ.ಹಸನ್ ಹಾಜಿ, ಪ್ರಚಾರ ಸಮಿತಿ ಸಂಚಾಲಕ ಎಸ್.ಸಂಶುದ್ದೀನ್, ಜಮಾಅತ್ ಪ್ರಧಾನ ಕಾರ್ಯದರ್ಶಿ ಕೆ.ವೈ.ಉಸ್ಮಾನ್, ಕಾರ್ಯದರ್ಶಿ ಹಸೈನಾರ್ ಜಯನಗರ, ಆರ್ಥಿಕ ಸಮಿತಿ ಅಧ್ಯಕ್ಷ ಅಬ್ದುಲ್ ಸಮದ್ ಹಾಜಿ, ಉಪಾಧ್ಯಕ್ಷ ಲತೀಫ್ ಸಿಲಿಕಾನ್ ಪತ್ರಿಕಾಗೋಷ್ಠಿಯಲ್ಲಿದ್ದರು.
ನೂತನ ಖಾಝಿ ನೇಮಕಕ್ಕೆ ವಿರೋಧ
ಸುಳ್ಯ: ಮೊಗರ್ಪಣೆ ಮುಹಿಯ್ಯುದ್ದೀನ್ ಜುಮಾ ಮಸೀದಿಗೆ ನೂತನ ಖಾಝಿಯವರನ್ನು ನೇಮಕ ಮಾಡುವುದಕ್ಕೆ ಜಮಾಅತ್‌ನ ಮಾಜಿ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಾಅತ್‌ನ ಮಾಜಿ ಅಧ್ಯಕ್ಷ ಜಿ.ಇಬ್ರಾಹಿಂ ಹಾಜಿ ಹಾಗೂ ಮಾಜಿ ಉಪಾಧ್ಯಕ್ಷ ಹೆಚ್.ಎ.ಉಮ್ಮರ್, ಜಮಾಅತ್‌ನ ಸರ್ವಸದಸ್ಯರ ಅನುಮತಿಯನ್ನು ಪಡೆದು ಖಾಝಿ ನೇಮಕ ಮಾಡಬೇಕಾದದ್ದು ಶರೀಯತ್ ನಿಯಮವಾಗಿದೆ. ಆದರೆ ಈ ನಿಯಮಗಳನ್ನು ಗಾಳಿಗೆ ತೂರಿ ಮಾಡುತ್ತಿರುವ ಈ ನೇಮಕವು ದುರುದ್ದೇಶ ಪೂರಿಕೆಯಾಗಿದೆ. ಜಮಾಅತ್‌ನ ಮಾಜಿ ಅಧ್ಯಕ್ಷರು ಸೇರಿದಂತೆ ಎಲ್ಲ ಹಿರಿಯರ ಅಭಿಪ್ರಾಯಗಳನ್ನು ಕೇಳದೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಡಳಿತ ಸಮಿತಿ ಸದಸ್ಯರನ್ನು ಕಡೆಗಣಿಸಿ ಮಾಡುತ್ತಿರುವ ಈ ನೇಮಕಕ್ಕೆ ನಮ್ಮೆಲ್ಲರ ವಿರೋಧವಿದೆ ಎಂದರು.
ಪರಸ್ಪರ ಸೌಹಾರ್ದತೆಯಿಂದ, ಒಗ್ಗಟ್ಟಿನಿಂದ ಜಮಾಅತ್ ಸದಸ್ಯರೆಲ್ಲರು ಇರುವಾಗ, ಖಾಝಿ ನೇಮಕದ ಬಳಿಕ ಜಮಾಅತ್ ಸದಸ್ಯರು ಪರಸ್ಪರ ಕಚ್ಚಾಡುವಂತಹ ಅಶಾಂತಿಹ ವಾತಾವರಣ ಸೃಷ್ಟಿಯಾಗಲಿದೆ. ಈ ನೇಮಕದಿಂದ ಸಮಾಜಕ್ಕೆ ಆಗಲಿ, ಜಮಾಅತ್‌ಗಾಗಲಿ ಯಾವುದೇ ಲಾಭವಿಲ್ಲ. ಖಾಝಿಯವರ ಬಗ್ಗೆ ನಮಗೆ ಗೌರವವಿದೆ. ಅದರೆ ನಮ್ಮ ಜಮಾಅತ್‌ನ ಎಲ್ಲರು ವಿದ್ಯಾವಂತರೇ ಆಗಿರುವಾಗ ಎಲ್ಲದಕ್ಕೂ ಖಾಝಿಯವರ ಅಭಿಪ್ರಾಯ ಕೇಳುವ ಸ್ಥಿತಿ ಉಂಟಾಗಬಹುದು. ನಮ್ಮೊಳಗೇ ಗುಂಪುಗಳು ಸೃಷ್ಟಿಯಾಗಬಹುದು ಎಂದು ಅವರು ಹೇಳಿದರು.
ಜಮಾಅತ್‌ನ ಸದಸ್ಯರಾದ ಹನೀಫ್ ಜಿ., ಪಿ.ಎ.ಅಝೀರ್ ಜಯನಗರ, ಲತೀಫ್ ಜಿ., ಅಬ್ದುಲ್ಲ ಗೂನಡ್ಕ, ಎನ್.ಎಂ.ಹಮೀದ್ ಕೊಯನಾಡು ಪತ್ರಿಕಾಗೋಷ್ಠಿಯಲ್ಲಿದ್ದರು.