ಭಾರತದಲ್ಲಿ 25 ಲಕ್ಷಕ್ಕೂ ಅಧಿಕ ಜನರು ಆರ್‌ಎಚ್‌ಡಿ ಪೀಡಿತರು
ಜಮ್ಮು,ಎ.16: ಭಾರತದಲ್ಲಿ 25 ಲಕ್ಷಕ್ಕೂ ಅಧಿಕ ಜನರು ವಾತರೋಗಗ್ರಸ್ತ ಹೃದಯ ಕಾಯಿಲೆ(ಆರ್‌ಎಚ್‌ಡಿ)ಯಿಂದ ಬಳಲುತ್ತಿದ್ದಾರೆ.
ಲುಧಿಯಾನದ ಫೋರ್ಟಿಸ್ ಆಸ್ಪತ್ರೆಯ ಹೃದ್ರೋಗ ವಿಭಾಗದ ನಿರ್ದೇಶಕ ವಿ.ಕೆ.ಶರ್ಮಾ ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದರು. ಈ ಕಾಯಿಲೆಯು ಹೃದಯದ ಕವಾಟಗಳಿಗೆ ಹಾನಿಯನ್ನುಂಟು ಮಾಡುತ್ತದೆ.
ಜಮ್ಮುವಿನಲ್ಲಿ ಪ್ರತಿ 10,000 ಜನರಲ್ಲಿ 1.5 ಜನರು ಆರ್‌ಎಚ್‌ಡಿಯಿಂದ ನರಳುತ್ತಿದ್ದಾರೆ ಎಂದರು.
ಆರ್‌ಎಚ್‌ಡಿ ಪೀಡಿತ ರೋಗಿಗಳಿಗೆ ಈ ಕಾಯಿಲೆ ಇರುವ ಬಗ್ಗೆ ಅವರ ಮೂಲವೈದ್ಯರಿಗೆ ಗೊತ್ತಾಗುವಾಗ ತುಂಬ ತಡವಾಗಿರುತ್ತದೆ ಮತ್ತು ಇದರಿಂದಾಗಿ ಚಿಕಿತ್ಸೆ ಕಷ್ಟವಾಗುತ್ತದೆ. ಸಾಕಷ್ಟು ಮೊದಲೇ ರೋಗಿಗೆ ಮಾಹಿತಿ ನೀಡಿದರೆ ಆತನ ಪ್ರಾಣವನ್ನು ಉಳಿಸಬಹುದಾಗಿದೆ ಎಂದರು.
ರಕ್ತದೊತ್ತಡ ಮತ್ತು ಮಧುಮೇಹ ಸದ್ದಿಲ್ಲದೆ ಕೊಲ್ಲುವ ಕಾಯಿಲೆಗಳಾಗಿದ್ದು,ಸೂಕ್ತ ಸಮಯದಲ್ಲಿ ಪತ್ತೆ ಹಚ್ಚದಿದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಲ್ಲವು ಎಂದ ಅವರು, ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟ ಇತ್ಯಾದಿಗಳ ನಿಯಮಿತ ತಪಾಸಣೆ ಅಗತ್ಯವಾಗಿವೆ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ರಕ್ತದೊತ್ತಡವನ್ನು ದೂರವಿರಿಸಬಹುದಾಗಿದೆ ಎಂದರು.
ನೂತನ ಆವಿಷ್ಕಾರಗಳು ಮತ್ತು ಆಧುನಿಕ ವೈಜ್ಞಾನಿಕ ತಂತ್ರಜ್ಞಾನಗಳಿಂದಾಗಿ ಇಂದು ಹೃದಯ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ತುಂಬ ಪ್ರಗತಿಯಾಗಿದ್ದು,ಅದನ್ನು ಅತ್ಯಂತ ಸುರಕ್ಷಿತವನ್ನಾಗಿಸಿದೆ ಎಂದು ಶರ್ಮಾ ತಿಳಿಸಿದರು.