ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಮಮತಾ ಗಟ್ಟಿ

Update: 2016-04-16 13:40 GMT

ಕೊಣಾಜೆ: ಕುರ್ನಾಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಕಡೆ ಇದ್ದು ಇದರ ಶಾಶ್ವತ ಪರಿಹಾರಕ್ಕಾಗಿ ಹಂತ ಹಂತವಾಗಿ ಯೋಜನೆ ರೂಪಿಸಲಾಗುವುದು. ಮುಡಿಪು ಸಮೀಪದ ಸಾಂಬಾರ್‌ತೋಟ ಬಳಿಯ ಕಟ್ಟದಗುರಿ ಎಂಬಲ್ಲಿರುವ ಕೆರೆಯನ್ನು ಅಭಿವೃದ್ದಿ ಪಡಿಸಿದರೆ ಈ ಭಾಗದ ಜನರಿಗೆ ಬಹಳಷ್ಟು ಅನುಕೂಲಕರವಾಗಲಿದ್ದು ಈ ಕೆರೆಯ ಅಭಿವೃದ್ದಿಗೆ ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕುರ್ನಾಡು ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಅವರು ಹೇಳಿದರು.

  ಅವರು ಮುಡಿಪು ಸಮೀಪದ ಸಾಂಬಾರ್‌ತೋಟ ಬಳಿಯ ಕಟ್ಟದಗುರಿ ಎಂಬಲ್ಲಿರುವ ಕೆರೆಯ ಸಮಸ್ಯೆಯ ಬಗ್ಗೆ ಗುರುವಾರ ಜನರ ಅಹವಾಲನ್ನು ಸ್ವೀಕರಿಸಿ ಕೆರೆಯನ್ನು ವೀಕ್ಷಿಸಿ ಭರವಸೆ ನೀಡಿದರು.

ಕರೆಯನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿ ಈ ಭಾಗದಲ್ಲಿ ಕೃಷಿಗೆ ಹಾಗೂ ಕುಡಿಯುವ ನೀರಿಗಾಗಿ ಈ ಕೆರೆಯನ್ನು ಬಳಸಿಕೊಳ್ಳುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದರು.

ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಇದೇ ಸಂದರ್ಭದಲ್ಲಿ ಮಾತನಾಡಿ, ಈ ಕೆರೆಯು ಕಳೆದ ಹಲವಾರು ವರ್ಷದಿಂದ ಈ ಭಾಗದ ಜನರಿಗೆ ಕೃಷಿ ಚಟುವಟಿಕೆಗೆ ಅನುಕೂಲವಾಗುತ್ತಿತ್ತು. ಇತ್ತೀಚಿನ ಕೆಲ ವರ್ಷಗಳಲ್ಲಿ ಕೆರಯಲ್ಲಿ ಹೂಳು ತುಂಬಿ ಸಮಸ್ಯೆ ಸೃಷ್ಟಿಯಾಗಿದೆ. ಶೀಘ್ರವೇ ಇದರ ಅಭಿವೃದ್ದಿ ನಡೆದು ಜನರಿಗೆ ಅನುಕೂಲವಾಗುವಂತಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಉಮ್ಮರ್ ಪಜೀರ್, ಪಜೀರ್ ಪಂಚಾಯಿತಿ ಸದಸ್ಯರಾದ ಇಂತಿಯಾರ್, ಪ್ಲೋರಿನಾ ಡಿಸೋಜಾ, ಮಾಜಿ ಅಧ್ಯಕ್ಷರಾದ ಮೂಸಾ ಹಾಜಿ, ಮೊಯ್ದಿನ್‌ಕುಂಞಿ ಸಿ,ಎಂ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News