ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ : ಎಕ್ಸ್‌ಪರ್ಟ್, ಮಹೇಶ್ ಪಿಯು ಕಾಲೇಜುಗಳ ಮೇಲೆ ಸಿ.ಐ.ಡಿ ದಾಳಿ

Update: 2016-04-16 15:43 GMT

ಮಂಗಳೂರು, ಎ. 16: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಇಂದು ನಗರದ ಪ್ರತಿಷ್ಠಿತ ಖಾಸಗಿ ಕಾಲೇಜುಗಳಾದ ಎಕ್ಸ್‌ಪರ್ಟ್ ಪಿಯು ಕಾಲೇಜು ಮತ್ತು ಮಹೇಶ್ ಪಿಯು ಕಾಲೇಜುಗಳ ಮೇಲೆ ದಾಳಿ ನಡೆಸಿದ್ದಾರೆ.

 ಇತ್ತೀಚೆಗೆ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ನೀಡಿರುವ ಮಾಹಿತಿಯನ್ವಯ ಈ ದಾಳಿ ನಡೆದಿದೆ. ದಾಳಿಯ ಸಂದರ್ಭದಲ್ಲಿ ಈ ಎರಡೂ ಕಾಲೇಜುಗಳಿಂದ ಕೆಲವು ಲಿಖಿತ ದಾಖಲೆ ಪತ್ರಗಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸಿಐಡಿ ಅಧಿಕಾರಿಗಳಿಂದ ದಾಳಿಗೊಳಗಾದ ಇತರ ಖಾಸಗಿ ವಿದ್ಯಾ ಸಂಸ್ಥೆಗಳಾದ ನಾರಾಯಣ ಕಾಲೇಜು, ಚೈತನ್ಯ ಕಾಲೇಜು ವಿದ್ಯಾರಣ್ಯಪುರ, ದೀಕ್ಷಾ ಯಲಹಂಕ, ಪ್ರೆಸಿಡೆನ್ಸಿ ಕೆಂಪಪುರ, ಬೃಂದಾವನ ಸಂಜಯನಗರ, ರೋಯಲ್ ಕಾನ್‌ಕೋಡ್ ಕಲ್ಯಾಣನಗರ, ನಾರಾಯಣ ಬಳ್ಳಾರಿ, ಚೈತನ್ಯ ಬಳ್ಳಾರಿ, ದೀಕ್ಷಾ ತುಮಕೂರು ಕಾಲೇಜುಗಳು ಸೇರಿವೆ.

ಇದೇ ವೇಳೆ ಹೆಚ್ಚಿನ ವಿಚಾರಣೆಗಾಗಿ ಮಂಗಳೂರಿನಿಂದ ಇಬ್ಬರು ಉಪನ್ಯಾಸಕರನ್ನು ಕೂಡ ಸಿ ಐ ಡಿ ವಶಕ್ಕೆ ಪಡೆದಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಆದರೆ ಇದರಲ್ಲಿ ಎಕ್ಸ್ ಪರ್ಟ್ ಹಾಗು ಮಹೇಶ್ ಕಾಲೇಜಿನ ಉಪನ್ಯಾಸಕರು ಇದ್ದಾರೆಯೇ ಮತ್ತು ಎಷ್ಟು ಮಂದಿ ಯಾವ ಕಾಲೇಜಿನವರು ಎಂಬುದು ಖಚಿತವಾಗಿಲ್ಲ. 

ಈ ಎರಡೂ ಮಂಗಳೂರಿನ ಅತಿ ಪ್ರತಿಷ್ಠಿತ ಹಾಗು ದುಬಾರಿ ಕಾಲೇಜುಗಳು ಎಂದೇ ಪ್ರಸಿದ್ಧಿ ಪಡೆದ ಶಿಕ್ಷಣ ಸಂಸ್ಥೆಗಳು. ಕೋಚಿಂಗ್ ಸೆಂಟರ್ ಆಗಿ ಪ್ರಾರಂಭವಾದ ಎಕ್ಸ್ ಪರ್ಟ್ ಇಂದು ರಾಜ್ಯದ ಅತ್ಯಂತ ಪ್ರತಿಷ್ಠಿತ ಪಿಯು ಕಾಲೇಜುಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿದೆ. ಪ್ರತಿವರ್ಷ ಪಿಯು ಫ಼ಲಿತಾಂಶದಲ್ಲಿ  ಈ ಕಾಲೇಜಿನಿಂದ ರಾಜ್ಯಮಟ್ಟದ ಟಾಪರ್ ಗಳು ಇರುತ್ತಾರೆ.    ದೇಶದ ಪ್ರತಿಷ್ಠಿತ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜಿನ  ಸೀಟುಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಭರವಸೆ ನೀಡುವ ಈ ಕಾಲೇಜಿಗೆ ಮಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಸಾಲುಗಟ್ಟಿ ಬಂದು ದಾಖಲಾತಿ ಪಡೆಯುತ್ತಾರೆ. ಹೇಗಾದರೂ ಈ ಕಾಲೇಜಿನಲ್ಲಿ ಸೀಟು ಪಡೆಯಲು ಹೆಚ್ಚಿನ ಶುಲ್ಕ ನೀಡಿ, ಪ್ರಭಾವಿಗಳಿಂದ ಶಿಫಾರಸು ಮಾಡಿಸಿ ಬಂದು ಸೇರುತ್ತಾರೆ. ನಗರದ ಹೊರವಲಯದ ವಳಚ್ಚಿಲ್ ನಲ್ಲಿ ಸಂಸ್ಥೆಯ ಬೃಹತ್ ಕ್ಯಾಂಪಸ್ ಇತ್ತೀಚಿಗೆ ತಲೆ ಎತ್ತಿದೆ. 

ಮಹೇಶ್ ಕಾಲೇಜು ಕೂಡ ಕಳೆದ ಕೆಲವು ವರ್ಷಗಳಿಂದ ಇದೇ ರೀತಿಯ ಪ್ರಚಾರದೊಂದಿಗೆ ಹೆಸರು ಗಳಿಸುತ್ತಾ ಬಂದಿದೆ. ಇತ್ತೀಚಿಗೆ ನಗರದ ಕೊಟ್ಟಾರ ಚೌಕಿಯಲ್ಲಿ ಸುಸಜ್ಜಿತ ನೂತನ ಕಾಲೇಜು ಕಟ್ಟಡವನ್ನೂ ಅದು ನಿರ್ಮಿಸಿತ್ತು. 

ದಾಳಿಯಲ್ಲ, ಭೇಟಿ: ನರೇಂದ್ರ ನಾಯಕ್

ನಗರದ ಪ್ರತಿಷ್ಠಿತ ಖಾಸಗಿ ವಿದ್ಯಾ ಸಂಸ್ಥೆಯಾಗಿರುವ ಎಕ್ಸ್‌ಪರ್ಟ್ ಪಿಯು ಕಾಲೇಜಿಗೆ ಇಂದು ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬುದು ತಪ್ಪು ಮಾಹಿತಿ ಎಂದು ಎಕ್ಸ್‌ಪರ್ಟ್‌ನ ಚೇರ್‌ಮೆನ್ ನರೇಂದ್ರ ನಾಯಕ್ ತಿಳಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಕೆಲವು ಖಾಸಗಿ ವಿದ್ಯಾ ಸಂಸ್ಥೆಗಳ ಮೇಲೆ ಸಿಐಡಿ ಪೊಲೀಸರು ತನಿಖೆಯನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಆಯಾ ಖಾಸಗಿ ವಿದ್ಯಾ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅದರಂತೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಎಕ್ಸ್‌ಪರ್ಟ್ ಕಾಲೇಜಿಗೆ ಬಂದು ನೋಟಿಸ್ ಕೊಟ್ಟು ಕೆಲವು ದಾಖಲೆ ಪತ್ರಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಕೋರಿದ್ದರು. ಶನಿವಾರ ಬಂದು ದಾಖಲೆ ಪತ್ರಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ. ಆದ್ದರಿಂದ ಸಿಐಡಿ ಅಧಿಕಾರಿಗಳು ಎಕ್ಸ್‌ಪರ್ಟ್‌ಗೆ ದಾಳಿ ನಡೆಸಿಲ್ಲ. ಮಾಹಿತಿಗಳನ್ನು ಕೇಳಲು ಭೇಟಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

2016ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ವಿವರ, ಭೌತ ಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವ ಶಾಸ್ತ್ರ ವಿಷಯದ ಉಪನ್ಯಾಸಕರ ವಿವರ ಮತ್ತು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಒದಗಿಸುವಂತೆ ಅವರು ನೋಟಿಸ್‌ನಲ್ಲಿ ಕೋರಿದ್ದರು. ಶನಿವಾರ ಎಕ್ಸ್‌ಪರ್ಟ್‌ಗೆ ಭೇಟಿ ನೀಡಿದ್ದ ಅಧಿಕಾರಿಗಳಿಗೆ ಅವರು ಕೇಳಿದ್ದ ದಾಖಲೆಗಳನ್ನು ಒದಗಿಸಿದ್ದೇವೆ ಎಂದು ನರೇಂದ್ರ ನಾಯಕ್ ತಿಳಿಸಿದರು.

ದಾಳಿ ನಡೆದಿಲ್ಲ: ಅಜಿತ್ ಡಿಸೋಜ

ಮಹೇಶ್ ಪಿಯು ಕಾಲೇಜಿಗೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿಲ್ಲ. ಕೆಲವು ಕಾಲೇಜುಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಅದರಂತೆ ಶುಕ್ರವಾರ ಸಿಐಡಿ ಅಧಿಕಾರಿಗಳು ಕಾಲೇಜಿಗೆ ಬಂದು ಪಿಯು ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ವಿವರ, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ವಿವರಗಳನ್ನು ಕೇಳಿದ್ದಾರೆ. ಅವನ್ನು ನಾವು ಒದಗಿಸಿದ್ದೇವೆ ಎಂದು ಮಹೇಶ್ ಪಿಯು ಕಾಲೇಜಿನ ಪ್ರಾಂಶುಪಾಲ ಅಜಿತ್ ಡಿಸೋಜ ಪ್ರತಿಕ್ರಿಯಿಸಿದ್ದಾರೆ.

ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ: ಚೆರಿಯನ್

ಮಂಗಳೂರು, ಎ. 16: ರ್ಯಾಂಕ್ ಗಳಿಕೆಗಾಗಿ ಖಾಸಗಿ ಕಾಲೇಜುಗಳ ನಡುವಿನ ಪೈಪೋಟಿಯೇ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣವಾಗಿದ್ದು, ಇದರಿಂದಾಗಿ ಕಠಿಣ ಪರಿಶ್ರಮಪಟ್ಟು ಓದಿದ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗಿದೆ ಎಂದು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ದ.ಕ. ಜಿಲ್ಲಾಧ್ಯಕ್ಷ ಜೆ.ಪಿ.ಎಂ. ಚೆರಿಯನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖ್ಯಾಸಗಿ ಪಿಯು ಕಾಲೇಜುಗಳು ಉತ್ತಮ ಫಲಿತಾಂಶ ಮತ್ತು ರ್ಯಾಂಕ್ ಗಳಿಕೆಗಾಗಿ ಪ್ರಶ್ನೆ ಪತ್ರಿಕೆ ಖರೀದಿಯ ದಂಧೆಯಲ್ಲಿ ತೊಡಗಿ ಇತರ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಸರಕಾರಿ ಕಾಲೇಜುಗಳಲ್ಲಿ ಹಾಗೂ ಇತರ ಖಾಸಗಿ ಕಾಲೇಜುಗಳಲ್ಲಿ ಪರಿಶ್ರಮಪಟ್ಟು ಕಲಿಯುತ್ತಿರುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News