×
Ad

ಸೌಹಾರ್ದತೆ ,ಭಾವೈಕ್ಯತೆಗೆ ಧಕ್ಕೆ ತರುವುದು ದುರಂತ:ಉಮಾಶ್ರೀ

Update: 2016-04-16 21:42 IST

 ಮಂಗಳೂರು, ಎ.16: ಮನುಷ್ಯನ ಸಂಬಂಧಗಳಿಗೆ ಭಾಷೆಗಿಂತ ಮುಖ್ಯವಾಗಿ ಬೇಕಾದದ್ದು ಸೌಹಾರ್ದತೆ ಮತ್ತು ಪ್ರೀತಿ. ಆದರೆ ಸಂವಿಧಾನವಿರೋಧಿ ಚಟುವಟಿಕೆಗಳ ಮೂಲಕ ಸೌಹಾರ್ದತೆ ,ಭಾವೈಕ್ಯತೆಗೆ ಧಕ್ಕೆ ಬರುತ್ತಿರುವುದು ದುರಂತ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

  ಅವರು ನಗರದ ಪುರಭವನದಲ್ಲಿ ಇಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ 2015ರ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಬ್ಯಾರಿ ಯುವ ಬರಹಗಾರರು -ಕಲಾವಿದರ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಭಾಷೆ , ಸಂಸ್ಕೃತಿ ಉಳಿಯಬೇಕಾದರೆ ಭಾಷೆ ಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳನ್ನು ಡಿಜಿಟೈಲೇಶನ್ ಮಾಡಬೇಕು. ಇದರಿಂದ ಮುಂದಿನ ತಲೆಮಾರುಗಳಿಗೆ ಭಾಷೆಗೆ ಸಂಬಂಧಪಟ್ಟದನ್ನು ಉಳಿಸಿಕೊಟ್ಟಾಂತಾಗುತ್ತದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಶೀಘ್ರದಲ್ಲಿಯೆ ಮಾಡಲಾಗುವುದು. ಮಂಗಳೂರು ವಿಶ್ವವಿದ್ಯಾನಿಲಯಲದಲ್ಲಿ ಬ್ಯಾರಿ ಅಧ್ಯಯನ ಪೀಠ ರಚಿಸಲು ಇರುವ ಬೇಡಿಕೆಯ ಬಗ್ಗೆ ಗಮನಹರಿಸಲಾಗುವುದು ಎಂದು ಹೇಳಿದರು.

     ಕಾರ್ಯಕ್ರಮವನ್ನು ತೆಂಗಿನ ಸಸಿಯನ್ನು ಯುವಕರಿಗೆ ನೀಡುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅವರು ನೆಲಮೂಲ ಸಂಸ್ಕೃತಿ ಇರುವ ನಮ್ಮ ದೇಶದಲ್ಲಿ ಸಂಘಟನೆಯ ಅಗತ್ಯವಿದೆಯೆ ಹೊರತು ವಿಘಟನೆಯಲ್ಲ. ದೇಶದಲ್ಲಿ ಮರ್ಯಾದ ಹತ್ಯೆ, ಅಸಹಿಷ್ಣುತೆಯ ವಿಷವರ್ತುಲ ಹೆಚ್ಚಿದ್ದು ವಿಷವರ್ತುಲದಲ್ಲಿ ಸಿಲುಕಿಕೊಂಡಂತೆ ದೇಶ ನರಳುತ್ತಿದೆ. ಭಾರತ ಏಕಸಂಸ್ಕೃತಿ,ಏಕಭಾಷೆಯ ದೇಶವಲ್ಲ, ಬಹುಸಂಸ್ಕೃತಿ,ಬಹುಭಾಷೆಯ ದೇಶವೆಂದು ಹೇಳಿದರು.

 ಸಚಿವ ಅಭಯಚಂದ್ರ ಜೈನ್ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿದರು. ಬೆಲ್ಕಿರಿ ಸಂಚಿಕೆಯನ್ನು ಸಚಿವೆ ಉಮಾಶ್ರೀ ಬಿಡುಗಡೆಗೊಳಿಸಿದರು.

 ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್, ಶಾಸಕ ಮೊಯ್ದಿನ್ ಬಾವ,ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮೇಯರ್ ಹರಿನಾಥ್ ಉಪಸ್ಥಿತರಿದ್ದರು.

    ಅಶ್ರಫ್ ಅಪೋಲೋ ಮತ್ತು ಸಂಗಡಿಗರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಪ್ರಸ್ತಾವಿಸಿದರು. ಸದಸ್ಯೆ ರೊಹಾರ ಅಬ್ಬಾಸ್ ವಂದಿಸಿದರು. ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.

 ಬ್ಯಾರಿ ಭಾಷೆಯಲ್ಲಿ ಭಾಷಣ ಮಾಡಿದ ರಮಾನಾಥ ರೈ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬ್ಯಾರಿ ಭಾಷೆಯಲ್ಲಿ ಭಾಷಣ ಮಾಡಿದರು. ಭಾಷಣದ ಆರಂಭದಿಂದ ಕೊನೆಯವರೆಗೂ ಬ್ಯಾರಿ ಭಾಷೆಯಲ್ಲಿಯೆ ಮಾತನಾಡಿದ ಇವರು ಇದು ತಾವು ಎರಡನೆ ಬಾರಿಗೆ ಬ್ಯಾರಿ ಭಾಷೆಯಲ್ಲಿಯೆ ಮಾಡುತ್ತಿರುವ ಭಾಷಣ. ಬ್ಯಾರಿ ಭಾಷೆಯಲ್ಲಿ ಸರಾಗವಾಗಿ ಮಾತನಾಡಲು ಸಾಧ್ಯವಾದರೂ ಭಾಷಣ ಮಾಡಲು ಸ್ವಲ್ಪ ಕಷ್ಟವಿದೆ ಎಂದು ಹೇಳುತ್ತಾ ಬ್ಯಾರಿ ಭಾಷೆಯಲ್ಲಿ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಬಾಕ್ಸ್ ಮಾಡಬಹುದು:

   2015ರ ಗೌರವ ಪ್ರಶಸ್ತಿಯನ್ನು ಮೂವರು ಸಾಧಕರಿಗೆ ಇಂದು ವಿತರಿಸಲಾಯಿತು. ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪತ್ರಕರ್ತ ಬಿ.ಎಂ.ಹನೀಫ್ ಅವರಿಗೆ, ಸಂಸ್ಕೃತಿ ಮತ್ತು ಸಂಘಟನೆ ವಿಭಾಗದಲ್ಲಿ ಮುಹಮ್ಮದ್ ಅಲಿ ಉಚ್ಚಿಲ್ ಅವರಿಗೆ, ಕಲಾಕ್ಷೇತ್ರದಲ್ಲಿ ಮಹಮ್ಮದ್ ಕೆ.ಮಠ ಅವರಿಗೆ ಸಚಿವರಾದ ಉಮಾಶ್ರೀ ಮತ್ತು ಬಿ.ರಮಾನಾಥ ರೈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

  ಡಾ.ವಹಾಬ್ ದೊಡ್ಡಮನೆ ಸ್ಮಾರಕ ಬ್ಯಾರಿ ಅಧ್ಯಯನ ಪ್ರಶಸ್ತಿಯನ್ನು ಯಾಕುಬ್ ಖಾದರ್ ಗುಲ್ವಾಡಿ ಅವರಿಗೆ ಶಾಸಕ ಮೊಯ್ದಿನ್ ಬಾವ ಪ್ರದಾನ ಮಾಡಿದರು. ಡಾ. ಸುಶೀಲಾ ಪಿ.ಉಪಾಧ್ಯಾಯ ಸ್ಮಾರಕ ಬ್ಯಾರಿ ಮಹಿಳಾ ಸಾಹಿತ್ಯ ಪ್ರಶಸ್ತಿಯನ್ನು ಮರಿಯಮ್ ಇಸ್ಮಾಯಿಲ್ ಉಳ್ಳಾಲಬೈಲ್ ಅವರಿಗೆ ಯು.ಪಿ.ಉಪಾಧ್ಯಾಯ ಮತ್ತು ಮನಪಾ ಮೇಯರ್ ಹರಿನಾಥ ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News