×
Ad

ಉಡುಪಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಮಗ್ರ ಯೋಜನೆ: ಜಿಲ್ಲಾಧಿಕಾರಿ ಡಾ.ವಿಶಾಲ್

Update: 2016-04-17 00:09 IST

ಉಡುಪಿ, ಎ.16: ಜಿಲ್ಲೆಯಲ್ಲಿ ಪ್ರವಾಸೋ ದ್ಯಮದ ಅಭಿವೃದ್ಧಿಗೆ ಸಾಧ್ಯತೆ ಇರುವ ಎಲ್ಲಾ ಅವಕಾಶಗಳನ್ನು ಬಳಸಿ ಕೊಂಡು, ಉಡುಪಿಯನ್ನು ದೇಶದ ಪ್ರವಾ ಸೋದ್ಯಮದ ಪ್ರಮುಖ ಕೇಂದ್ರವಾಗಿ ಗುರುತಿಸಲು ಸಮಗ್ರ ಯೋಜನೆಯನ್ನು ರೂಪಿಸಿ ಕಾರ್ಯ ಗತಗೊಳಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್.ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿ ವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. 2015-16ನೆ ಸಾಲಿನಲ್ಲಿ ರಾಜ್ಯ ಸರಕಾರದ 9.91 ಕೋಟಿ ರೂ. ಹಾಗೂ ಕೇಂದ್ರ ಸರಕಾರದ 9.13 ಕೋಟಿ ರೂ.ಅನುದಾನವನ್ನು ಬಳಸಿಕೊಂಡು ವಿವಿಧ ಅಭಿವೃದ್ಧಿ ಕಾಮ ಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಪ್ರವಾಸೋದ್ಯಮದ ಅಭಿವೃದ್ಧಿಗೆ ಅತೀಮುಖ್ಯವಾಗಿರುವ ಸಮರ್ಪಕ ಸಂಪರ್ಕ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಅಂತಿಮ ಹಂತದಲ್ಲಿದ್ದು, ವಿವಿಧ ಪ್ರವಾಸಿ ತಾಣಗಳ ಸಂಪರ್ಕಕ್ಕೆ ಅಗತ್ಯವಾದ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಹೆಲಿಟೂರಿಸಂ, ಧಾರ್ಮಿಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
 
ಹೆಜಮಾಡಿಯಿಂದ ಶಿರೂರುವರೆಗೆ 110ಕಿ.ಮೀ. ಉದ್ದದ ಬೀಚ್ ಪ್ರವಾಸೋದ್ಯಮದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಪಡುಬಿದ್ರೆ, ಕಾಪು, ಮರವಂತೆ-ತ್ರಾಸಿ, ಮಲ್ಪೆ ಬೀಚ್‌ಗಳ ಪ್ರವಾಸೋದ್ಯಮದ ನಿರ್ವಹಣೆಯನ್ನು ಖಾಸಗಿಯವರಿಗೆ ಒಪ್ಪಿಸಲಾಗಿದೆ. ಇದರಿಂದ 2013-14ರಲ್ಲಿ ಮಲ್ಪೆ ಬೀಚ್ ನಿಂದ ಬಂದ 21.88 ಲಕ್ಷ ರೂ.ಆದಾಯ, 2014-15ನೆ ಸಾಲಿಗೆ 59 ಲಕ್ಷಕ್ಕೆ ಹಾಗೂ 2015-16ನೆ ಸಾಲಿಗೆ 1.67 ಕೋಟಿ ರೂ.ಗಳಿಗೆ ಏರಿದೆ ಎಂದು ಡಾ.ವಿಶಾಲ್ ನುಡಿದರು. ಬೀಚ್ ಕ್ಲೀನಿಂಗ್ ಮೆಷಿನ್: ಜಿಲ್ಲೆಯ ಬೀಚ್‌ಗಳ ಸ್ವಚ್ಛತೆ ಯನ್ನು ಕಾಪಾಡಲು 75 ಲಕ್ಷ ರೂ. ವೌಲ್ಯದ ಬೀಚ್ ಕ್ಲೀನಿಂಗ್‌ಮೆಷಿನ್‌ನ್ನು ಮುಖ್ಯಮಂತ್ರಿಗಳ ಚಾಲೆಂಜ್ ಫಂಡ್‌ನಿಂದ ಖರೀದಿಸಲಾಗಿದೆ. ಶೀಘ್ರದಲ್ಲೇ ಅದು ಬೀಚ್‌ನ ನಿರ್ವ ಹಣೆಯನ್ನು ಮಾಡಲಿದೆ ಎಂದು ಡಾ.ವಿಶಾಲ್ ನುಡಿದರು.
ಕಳೆದ ತಿಂಗಳು ಪ್ರಾರಂಭಿಸಲಾದ ಹೆಲಿ ಟೂರಿಸಂನ್ನು ನಡೆಸಲು ಅದರ ಆಯೋಜಕರಿಗೆ ಸೂಚಿಸಲಾಗಿದೆ. ಎ.15ರಿಂದ ಮೇ 20ರವರೆಗೆ ಸದ್ಯಕ್ಕೆ ಪ್ರತಿ ಶನಿವಾರ ಮತ್ತು ರವಿವಾರದಂದು ಹೆಲಿಟೂರಿಸಂನ್ನು ನಡೆಸಲು ವ್ಯವಸ್ಥಾಪಕರು ಅನುಮತಿ ಕೇಳಿದ್ದಾರೆ ಎಂದರು.
ಮಲ್ಪೆ ಹಾಗೂ ಸೈಂಟ್ ಮೇರಿಸ್ ದ್ವೀಪದ ಅಭಿವೃದ್ಧಿಗೂ ಹಲವು ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ಇವುಗಳಲ್ಲಿ 4 ವಾಟರ್ ಸ್ಕೂಟಿ ಬೋಟ್, 4 ರೌಂಡಿಂಗ್ ಬೋಟ್, ಸೈಂಟ್ ಮೇರಿಸ್‌ಗೆ ಹೋಗಲು 4 ಪ್ಯಾಸೆಂಜರ್, 3 ದೊಡ್ಡ ಬೋಟ್‌ಗಳೊಂದಿಗೆ ದ್ವೀಪದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News