ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಅಂಬೇಡ್ಕರ್ ಪ್ರತಿಮೆ ಅನಾವರಣ
ಉಡುಪಿ, ಎ.16: ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾ ಆಡಳಿತ ಕಚೆೇರಿ ಸಂಕೀರ್ಣದ ಮುಂಭಾಗದಲ್ಲಿ ಹೊಸದಾಗಿ ನಿರ್ಮಿಸಲಾದ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೊಸ ಕಂಚಿನ ಪ್ರತಿಮೆಯನ್ನು ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಅವರು ಇಂದು ಬೆಳಗ್ಗೆ ಅನಾವರಣಗೊಳಿಸಿದರು.
ಮಣಿಪಾಲದ ಎಂಡ್‌ಪಾಯಿಂಟ್‌ನಲ್ಲಿ ಜಿಲ್ಲಾಧಿಕಾರಿ ಹೊಸ ಕಚೇರಿ ಸಂಕೀರ್ಣ ಸ್ಥಾಪಿಸಿದಾಗ ನಿರ್ಮಿಸಿದ ಅಂಬೇಡ್ಕರ್ ಪ್ರತಿಮೆಯ ಕುರಿತಂತೆ ದಲಿತ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 9.70 ಲಕ್ಷ ರೂ. ವೆಚ್ಚದಲ್ಲಿ 400ಕೆ.ಜಿ.ಭಾರದ ಏಳು ಅಡಿ ಎತ್ತರದ ಚಿನ್ನದ ಬಣ್ಣದಲ್ಲಿ ಕಂಚಿನ ಪ್ರತಿಮೆಯನ್ನು ಮೈಸೂರಿನ ಶಿಲ್ಪಿಯೊಬ್ಬರಿಂದ ನಿರ್ಮಿಸಿದ್ದು, ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ಇಂದು ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ವಿಶಾಲ್ ಈ ಪ್ರತಿಮೆಯನ್ನು ಜಿಲ್ಲೆಯ ಎಲ್ಲಾ ದಲಿತರಿಗೆ ಹಾಗೂ ಬಡ ವರಿಗೆ ಸಮರ್ಪಿಸುವುದಾಗಿ ತಿಳಿಸಿದರು. ಜಿಪಂನ ಸಿಇಒ ಪ್ರಿಯಾಂಕಾಮೇರಿ ಫ್ರಾನ್ಸಿಸ್, ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಸುಂದರ ಮಾಸ್ತರ್ ಹಾಗೂ ಮಂಜುನಾಥ ಗಿಳಿಯಾರ್ ಅವರು ಸಹ ಮಾತ ನಾಡಿದರು. ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಚೆನ್ನ ಬಸಪ್ಪ ಉಪಸ್ಥಿತರಿದ್ದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರೇಮನಾಥ್ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.