×
Ad

ಸಿಡಿಮದ್ದು ಪ್ರದರ್ಶನಕ್ಕೆ ಸಹಾಯಕ ಆಯುಕ್ತರ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಇಬ್ರಾಹೀಂ

Update: 2016-04-17 00:21 IST

ಮಂಗಳೂರು, ಎ.16: ಕೇರಳದ ಕೊಲ್ಲಂನಲ್ಲಿ ಸಿಡಿಮದ್ದುಗಳ ಪ್ರದರ್ಶನದಿಂದ ನಡೆದ ಭಾರೀ ಅನಾಹುತದ ಹಿನ್ನೆಲೆಯಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ದ.ಕ. ಜಿಲ್ಲಾಡಳಿತ ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಸಿಡಿಮದ್ದುಗಳ ಪ್ರದರ್ಶನಕ್ಕೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಈ ಬಗ್ಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ದೇಶನ ನೀಡಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಸಾರ್ವಜನಿಕ ಸ್ಥಳಗಳಲ್ಲಿ ಸಿಡಿಮದ್ದುಗಳ ಪ್ರದರ್ಶನ ಬಯಸುವವರು 10 ದಿನಗಳ ಮುಂಚಿತವಾಗಿ ಉಪವಿಭಾಗದ ಸಹಾಯಕ ಆಯುಕ್ತರಿಂದ ಅನುಮತಿ ಪಡೆದುಕೊಳ್ಳಬೇಕು. ಮಾತ್ರವಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಸಿಡಿಮದ್ದುಗಳನ್ನು ಅಂಗೀಕೃತ ಸಂಸ್ಥೆ/ ವ್ಯಕ್ತಿಗಳಿಂದಲೇ ಸಿಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಅನುಮತಿ ಕೋರುವ ಅರ್ಜಿಯಲ್ಲಿ ಅರ್ಜಿದಾರರ ಹೆಸರು, ವಿಳಾಸ, ಪ್ರದರ್ಶನದ ದಿನಾಂಕ ಹಾಗೂ ಪ್ರದರ್ಶನದ ಸಂದರ್ಭ ಎಷ್ಟು ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿಯಲ್ಲದೆ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆ ಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಳ್ಳುವುದು ಕೂಡಾ ಮುಖ್ಯ ಎಂದು ಸ್ಪಷ್ಟಪಡಿಸಿದರು. ಅನುಮತಿ ಇಲ್ಲದೆ ಸಿಡಿಮದ್ದುಗಳ ಪ್ರದರ್ಶನ ನಡೆಸಿದ್ದಲ್ಲಿ ಸ್ಫೋಟಕ ನಿಯಮಗಳ ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಸುಡುಮದ್ದುಗಳ ಮಾರಾಟಗಾರರು ಹಾಗೂ ಸಂಗ್ರಾಹಕರು ತಮ್ಮಲ್ಲಿ ರಿಜಿಸ್ಟರ್ ಪುಸ್ತಕವನ್ನು ಇಟ್ಟುಕೊಳ್ಳತಕ್ಕದ್ದು. ಅದರಲ್ಲಿ ಒಂದು ಲಕ್ಷ ರೂ. ವೌಲ್ಯಕ್ಕಿಂತ ಅಧಿಕ ವೌಲ್ಯದ ಪಟಾಕಿಗಳನ್ನು ಖರೀದಿಸಿರುವವರ ಹೆಸರು ವಿಳಾಸವನ್ನು ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು ಎಂದರು. ಎನ್‌ಒಸಿ ಇಲ್ಲದೆ ನವೀಕರಣಕ್ಕೆ ಅವಕಾಶವಿಲ್ಲ


ಜಿಲ್ಲೆಯಲ್ಲಿ ಏಳು ಸಿಡಿಮದ್ದು ತಯಾರಿಕಾ ಘಟಕಗಳಿಗೆ ಪರವಾನಿಗೆ ನೀಡಲಾಗಿದ್ದು, ಸಿಡಿಮದ್ದು ದಾಸ್ತಾನು ಮತ್ತು ಮಾರಾಟಕ್ಕೆ ಜಿಲ್ಲೆಯಲ್ಲಿ ಒಟ್ಟು 50 ಮಂದಿ ಪರವಾನಿಗೆ ಪಡೆದುಕೊಂಡಿದ್ದಾರೆ ಎಂದು ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು. ಮಂಗಳೂರು ಉಪ ವಿಭಾಗದ ಐದು ಪ್ರಕರಣಗಳನ್ನ ಹೊರತು ಪಡಿಸಿ ಜಿಲ್ಲೆಯ ಇತರ ಎಲ್ಲಾ ಪರವಾನಿಗೆದಾರರ ನವೀಕರಣ ಕಾರ್ಯ ನಡೆದಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಡಾ. ರಾಜೇಂದ್ರ ತಿಳಿಸಿದರು. ಪರವಾನಿಗೆ ನವೀಕರಣದ ಸಂದರ್ಭವೂ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ಅಗತ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದಾಗ, ಕಳೆದ 8 ವರ್ಷಗಳಿಂದ ಅಗ್ನಿಶಾಮಕ ಇಲಾಖೆಯಿಂದ ಯಾವುದೇ ನಿರಾಕ್ಷೇಪಣಾ ಪತ್ರ ನೀಡಲಾಗಿಲ್ಲ ಎಂದರು. ಇನ್ನು ಮುಂದೆ ನವೀಕರಣದ ಸಂದರ್ಭದಲ್ಲೂ ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಿಡಿಮದ್ದು ದಾಸ್ತಾನು ಮತ್ತು ಸಿಡಿಸುವ ಸ್ಥಳಕ್ಕೂ ಅಂತರ ಕಾಯ್ದುಕೊಳ್ಳಬೇಕು. ಸಿಡಿಮದ್ದು ಸಂಗ್ರಹಿಸಿ ಸುಡುವ ವಿವರವನ್ನು ಅನುಮತಿ ನೀಡುವ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಪುರಾಣಿಕ್ ಉಪಸ್ಥಿತರಿದ್ದರು.

ರಾತ್ರಿ 10ರಿಂದ 6ರವರೆಗೆ ಸಿಡಿಮದ್ದು ಸಿಡಿಸುವಂತಿಲ್ಲ: ಎಡಿಸಿ

ಸಿಡಿಮದ್ದುಗಳ ಪ್ರದರ್ಶನದ ಸಂದರ್ಭ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸುಮಾರು 100 ಮೀ. ವ್ಯಾಪ್ತಿಯಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕು. ಅಲ್ಲದೆ, ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯ ಅವಧಿಯಲ್ಲಿ ಸಿಡಿಮದ್ದು ಸಿಡಿಸಬಾರದು. ಸಿಡಿಸಿದ್ದಲ್ಲಿ ಅನುಮತಿ ರದ್ದುಪಡಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.


ನಿಷೇಧಿತ ವಸ್ತುಗಳಿಂದ ಸಿಡಿಮದ್ದು ತಯಾರಿಸದಿರಿ: ಎಸ್ಪಿ

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ., ಸಿಡಿಮದ್ದುಗಳ ಉತ್ಪಾದನೆಯ ಸಂದರ್ಭ ಯಾವೆಲ್ಲಾ ಸಾಮಗ್ರಿಗಳನ್ನು ಬಳಸಲಾಗುತ್ತದೆ ಎಂದು ಪ್ರಶ್ನಿಸಿದರು. ಇದಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ಕೆಲ ಉತ್ಪಾದಕರು ಪ್ರತಿಕ್ರಿಯಿಸಿ, ಗಂಧಕ, ಮಸಿ, ಉಪ್ಪು ಹಾಗೂ ಅಲುಮ್ಯಿನಿಯಂ ಪೌಡರ್ ಬಳಸುತ್ತಿರುವುದಾಗಿ ಹೇಳಿದರು. ಯಾವುದೇ ಕಾರಣಕ್ಕೂ ಸಿಡಿಮದ್ದುಗಳ ಉತ್ಪಾದನೆಯಲ್ಲಿ ನಿಷೇಧಿತ ವಸ್ತುಗಳನ್ನು ಬಳಸಬಾರದು ಮತ್ತು ಮಾರಾಟವನ್ನೂ ಮಾಡಬಾರದು ಎಂದು ಡಾ. ಶರಣಪ್ಪ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News