×
Ad

ಎ.19ರಂದು ಎಸ್.ಇ.ಬಿ.ಯಿಂದ ಮದ್ರಸಗಳ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ

Update: 2016-04-17 11:13 IST

ಮಂಗಳೂರು, ಎ.17 ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್(ಎಸ್.ಕೆ.ಎಸ್.ಎಂ.) ಅಧೀನ ಸಂಸ್ಥೆಯಾಗಿರುವ ಸಲಫಿ ಎಜುಕೇಶನ್ ಬೋರ್ಡ್(ಎಸ್.ಇ.ಬಿ.) ವತಿಯಿಂದ ಎಪ್ರಿಲ್ 19ರಂದು ಬೆಳಗ್ಗೆ 8:30ರಿಂದ ರಾತ್ರಿ 7ರವರೆಗೆ ಮಂಗಳೂರಿನ ಪುರಭವನದಲ್ಲಿ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಎ.13 ಹಾಗೂ 14ರಂದು ಬಲ್ಮಠ ಶಾಂತಿ ನಿಲಯದಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರ್ಯಕ್ರಮಗಳಲ್ಲಿ ಆಯ್ಕೆಯಾದ ಮದ್ರಸ ವಿದ್ಯಾರ್ಥಿಗಳು ಇಸ್ಲಾಮೀ ಹಾಡು, ಭಾಷಣ, ಚರ್ಚೆ, ದುಆ ಇತ್ಯಾದಿ ಸ್ಪರ್ಧೆಗಳಲ್ಲಿ ಕಿಡ್ಸ್, ಜೂನಿಯರ್ ಹಾಗೂ ಸೀನಿಯರ್ ಎಂಬ ಮೂರು ವಿಭಾಗಗಳಾಗಿ ಭಾಗವಹಿಸಲಿದ್ದಾರೆ.
 ಕುದ್ರೋಳಿ, ಫರಂಗಿಪೇಟೆ, ದೇರಳಕಟ್ಟೆ, ಅಳೇಕಲ, ಕೋಟೆಪುರ, ಉಳ್ಳಾಲ, ಉಪ್ಪಿನಂಗಡಿ, ನಂದಾವರ, ಚೊಕ್ಕಬೆಟ್ಟು ಮುಂತಾದ ಸಲಫಿ ಎಜುಕೇಶನ್ ಬೋಡ್ ಅಧೀನದಲ್ಲಿರುವ ಸುಮಾರು 25 ಮದ್ರಸಗಳ ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಇದೇ ಸಂದರ್ಭ ಸಂಪೂರ್ಣವಾಗಿ ಕುರ್‌ಆನ್ ಕಂಠಪಾಠ ಮಾಡಿದ ನಂದಾವರ ಸಲಫಿ ಮದ್ರಸದ ವಿದ್ಯಾರ್ಥಿ ಹಾಫಿಝ್ ಮುಝಮ್ಮಿಲ್ರನ್ನು ಸನ್ಮಾನಿಸಲಾಗುವುದು. ‘ಹೆತ್ತರಿಗೆ ಮಕ್ಕಳೊಂದಿಗೆ ಇರುವ ಬಾಧ್ಯತೆಗಳು’ ಎಂಬ ವಿಷಯದಲ್ಲಿ ಮೌಲವಿ ಹದಿಯತುಲ್ಲಾಹ್ ಸಲಫಿ ಮುಖ್ಯ ಭಾಷಣ ಮಾಡುವರು.

ಮುಖ್ಯ ಅತಿಥಿಗಳಾಗಿ ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಅಧ್ಯಕ್ಷ ಯು.ಎನ್.ಅಬ್ದುರ್ರಝಾಕ್, ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್, ನಿಕಟ ಪೂರ್ವ ಅಧ್ಯಕ್ಷ ಅಹ್ಮದ್ ಅನ್ಸಾರ್, ಅಬೂಬಕರ್ ಪಾಂಡೇಶ್ವರ ಭಾಗವಹಿಸಲಿದ್ದಾರೆ ಎಂದು ಸಲಫಿ ಎಜುಕೇಶನ್ ಬೋರ್ಡ್ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News