×
Ad

ರಾಷ್ಟ್ರಧ್ವಜಕ್ಕೆ ಅಪಮಾನ: ಹಾರ್ದಿಕ್‌ಗೆ ಒಂದು, ಮೋದಿಗೆ ಒಂದು ನೀತಿ ಏಕೆ - ಶಾ ಪ್ರಶ್ನೆ

Update: 2016-04-17 12:19 IST

ಅಹ್ಮದಾಬಾದ್, ಏ. 17- ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯೊಂದಕ್ಕೆ, ಗುಜರಾತ್ ನ್ಯಾಯಾಲಯ ನೀಡಿದ ಉತ್ತರ ಚಳವಳಿಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಅಂಜರ್ ನ್ಯಾಯಾಲಯ ಮಾಹಿತಿ ಹಕ್ಕು ಹೋರಾಟಗಾರರೊಬ್ಬರಿಗೆ ನೀಡಿದ ಉತ್ತರ ಈ ವಿವಾದಕ್ಕೆ ಕಾರಣ. 2002ರಲ್ಲಿ ನರೇಂದ್ರ ಮೋದಿ ತಮ್ಮ ಭಾಷಣವೊಂದರಲ್ಲಿ ರಾಷ್ಟ್ರಧ್ವಜವನ್ನು ಒಂದು ಬಟ್ಟೆ ತುಂಡು ಎಂದು ನೀಡಿದ್ದ ಹೇಳಿಕೆಯ ಧ್ವನಿಮುದ್ರಿತ ಅವತರಣಿಕೆ ಅಥವಾ ಭಾಷಣದ ಪ್ರತಿಯನ್ನು ನ್ಯಾಯಾಲಯ ಉಳಿಸಿಕೊಂಡಿಲ್ಲ. ಈ ದಾಖಲೆ ದಿಢೀರ್ ಕಣ್ಮರೆಯಾಗಿರುವ ಬಗ್ಗೆ ಅಚ್ಚರಿ ಹಾಗೂ ಆಕ್ರೋಶವನ್ನು ಆರ್‌ಟಿಐ ಹೋರಾಟಗಾರ ರೋಶನ್ ಶಾ ವ್ಯಕ್ತಪಡಿಸಿದ್ದಾರೆ.
ಇಡೀ ವ್ಯವಸ್ಥೆ ಮೋದಿ ರಕ್ಷಣೆಗೆ ಮುಂದಾಗಿರುವುದು ಇದರಿಂದ ತಿಳಿಯುತ್ತದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ವೃತ್ತಿನಿರತ ಅಪರಾಧಿ ಅವರು. ಈ ಎರಡೂ ದಾಖಲೆಗಳನ್ನು ಹೈಕೋರ್ಟ್‌ನಲ್ಲಿ ಅರ್ಜಿದಾರರು ಸಲ್ಲಿಸಿದ್ದರು. ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿತ್ತು. ಮೋದಿ ಭಾಷಣದ ಧ್ವನಿಮುದ್ರಿತ ಪ್ರತಿ ಮತ್ತು ಭಾಷಣದ ಲಿಖಿತ ಪ್ರತಿ ಹೇಗೆ ದೊರಕಿದೆ ಎನ್ನುವುದನ್ನು ಎಫ್‌ಐಆರ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಆದರೆ ವಕೀಲ ಖೇಮರಾಜ್ ಕೋಷ್ಟಿ ಅವರಿಗೆ ನೀಡಿದ ಆರ್‌ಟಿಐ ಉತ್ತರದಲ್ಲಿ ಈ ದಾಖಲೆಗಳ ಉಲ್ಲೇಖ ಇಲ್ಲ. ಆ ದಾಖಲೆಗಾಗಿ ಅವರು ಮನವಿ ಸಲ್ಲಿಸಿದ್ದರು.
ಇದಕ್ಕೆ ವಿರುದ್ಧವಾಗಿ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ರಾಷ್ಟ್ರಧ್ವನ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದರೂ, ಮೋದಿಯವರ ಪ್ರಕರಣದ ಬಗ್ಗೆ ಯಾರೂ ಇದುವರೆಗೆ ಚಕಾರ ಎತ್ತಿಲ್ಲ ಎನ್ನುವುದು ಷಾ ಆರೋಪ.
ಪೊಲೀಸರು ಹಾರ್ದಿಕ್ ಬಂಧನಕ್ಕೂ ಅದೇ ಪೊಲೀಸ್ ಮಾರ್ಗಸೂಚಿ ಅನುಸರಿಸಿದ್ದಾರೆ. ಇದು ಆಡಳಿತ ವರ್ಗದ ದ್ವಿಮುಖ ನೀತಿಯನ್ನು ಎತ್ತಿತೋರಿಸುತ್ತದೆ ಎನ್ನುವುದು ಅವರ ಆರೋಪ. ಒಂದೇ ತಪ್ಪು ಎಸಗಿದ ಇಬ್ಬರ ಮೇಲೆ ಕ್ರಮ ಕೈಗೊಳ್ಳುವಾಗ ಈ ಇಬ್ಬಂದಿತನದ ಧೋರಣೆ ಏಕೆ ಎನ್ನುವುದು ಅವರ ಪ್ರಶ್ನೆ. ಯೋಗ ದಿನಾಚರಣೆ ಸಮಾರಂಭದಲ್ಲಿ ಹಾಗೂ ಅಮೆರಿಕ ಪ್ರವಾಸ ವೇಳೆ ಮೋದಿ ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ್ದಾರೆ ಎಂಬ ಬಗ್ಗೆ ನೀಡಿದ ದೂರಿನ ಬಗ್ಗೆ ಕೂಡಾ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News