ಜೋಕಟ್ಟೆ ಭಾಗದಲ್ಲಿ ಗ್ರೀನ್ ಬೆಲ್ಟ್: ಸಚಿವ ದೇಶಪಾಂಡೆ
ಮಂಗಳೂರು, ಎ. 17: ಎಂಆರ್‌ಪಿಎಲ್ ವಿರುದ್ಧ ಡಿವೈಎಫ್‌ಐ ಮಾರ್ಗದರ್ಶನದಲ್ಲಿ ಜೋಕಟ್ಟೆ ನಾಗರಿಕರು ಕಳೆದ ಒಂದೂವರೆ ವರ್ಷದಿಂದ ನಡೆಸುತ್ತಿರುವ ಹೋರಾಟ ಅಂತಿಮ ಘಟ್ಟ ತಲುಪುತ್ತಿದೆ. ಸರಕಾರದ ಪ್ರತಿನಿಧಿಯಾಗಿ ಬೃಹತ್ ಕೈಗಾರಿಕಾ ಸಚಿವ ದೇಶಪಾಂಡೆ ಇಂದು ಎಂಆರ್‌ಪಿಎಲ್ ಕೈಗಾರಿಕಾ ಘಟಕದಲ್ಲೇ ಅಭಯಚಂದ್ರ ಜೈನ್, ಮೊಯ್ದಿನ್ ಬಾವಾ ಉಪಸ್ಥಿತಿಯಲ್ಲಿ ಹೋರಾಟ ಸಮಿತಿ ಮುಖಂಡರೊಂದಿಗೆ ಸಭೆ ನಡೆಸುವ ಮೂಲಕ ಜೋಕಟ್ಟೆ ನಾಗರಿಕರಿಗೆ ಕೊಂಚ ನೆಮ್ಮದ ನೀಡಿದ್ದಾರೆ.
ಸುಮಾರು ಒಂದೂವರೆ ತಾಸಿಗೂ ಹೆಚ್ಚು ಸಮಯ ನಡೆದ ಸಭೆಯಲ್ಲಿ ಸಚಿವರು ಜೋಕಟ್ಟೆ ಭಾಗದಲ್ಲೇ ಭೂಮಿ ವಶಪಡಿಸಿಕೊಂಡು ಗ್ರೀನ್ ಬೆಲ್ಟ್ ಮಾಡಿಸುವುದಾಗಿ ಘೋಷಿಸಿದರು. ಕಾನೂನಿನ ಪ್ರಕ್ರಿಯೆಗಾಗಿ ಗರಿಷ್ಟ ಹತ್ತು ದಿನಗಳ ಸಮಯ ನಿಗದಿಮಾಡಿದರು. ಎಂಆರ್‌ಪಿಎನ್‌ನಿಂದ ಈವರೆಗೆ ಆದ ತೊಂದರೆಗಾಗಿ ಗ್ರಾಮಸ್ಥರ ಕ್ಷಮೆಕೋರಿದರು.
ಜೋಕಟ್ಟೆ ನಾಗರಿಕರ ಹೋರಾಟ ತೀವ್ರಗೊಂಡು ಸೆಝ್, ಎಂಆರ್‌ಪಿಎಲ್ ಎಚ್‌ಪಿಸಿಎಲ್ ಸೇರಿದಂತೆ ಜೋಕಟ್ಟೆ ಗ್ರಾಮ ವ್ಯಾಪ್ತಿಯಲ್ಲಿ ಎಲ್ಲಾ ಉದ್ಯಮಗಳ ಕೆಲಸಗಳಿಗೆ ಗ್ರಾಮಸ್ಥರು ಪೂರ್ಣಪ್ರಮಾಣದಲ್ಲಿ ತಡೆಯೊಡ್ಡಿದಾಗ ಕಂಪೆನಿ, ಸರಕಾರ ಸಮಸ್ಯೆ ಪರಿಹರಿಸುವ ಕ್ರಮಕ್ಕೆ ಮುಂದಾಗಲೇಬೇಕಾಯಿತು. ಸಮಸ್ಯೆ ಪರಿಹಾರಕ್ಕೆ ಹಲವು ಹಂತದ ಸಭೆಗಳು ನಡೆದು ಕೆಲವು ತೀರ್ಮಾನಗಳನ್ನು ಕೈಗೊಳ್ಳಬೇಕಾಯಿತು. ಸುಮಾರು ಇನ್ನೂರು ಕೋಟಿ ವೆಚ್ಚದ ಆ ಎಲ್ಲಾ ಪರಿಹಾರ ಕ್ರಮಗಳಿಗೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದರೂ, ಗ್ರೀನ್ ಬೆಲ್ಟ್, ಬಫರ್ ಜೋನ್ ಸಂಬಂಧಿಸಿ ಊರಿನ ಭಾಗದಲ್ಲಿ ಭೂಮಿವಶಪಡಿಸಬೇಕು ಎಂಬ ಆಗ್ರಹಕ್ಕೆ ಕಂಪೆನಿ ಒಪ್ಪಿರಲಿಲ್ಲ.ಆದುದರಿಂದ ಅಂತಿಮ ತೀರ್ಮಾನವನ್ನು ರಾಜ್ಯ ಸರಕಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಇಪ್ಪತ್ತೇಳು ಎಕರೆ ಭೂಮಿವಶಪಡಿಸಿಕೊಳ್ಳು ಸರಕಾರಕ್ಕೆ ಪ್ರಸ್ತಾವನೆ ಕಳಿಹಿಸಿದ್ದರು. ಅದರಂತೆ ಸರಕಾರದ ಪ್ರತಿನಿಧಿಯಾಗಿ ಸಚಿವ ದೇಶಪಾಂಡೆ ಇಂದು ಎಂಆರ್‌ಪಿಎಲ್ ಕೈಗಾರಿಕಾ ಘಟಕದಲ್ಲೇ ಸಭೆ ನಡೆಸಿದ್ದಾರೆ ಎಂದು ಡಿವೈಎಫ್‌ಐನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.