ಮಲ್ಯರಿಂದ ರೂ. 950 ಕೋಟಿ ಐಡಿಬಿಐ ಸಾಲದ ಅರ್ಧದಷ್ಟು ವಿದೇಶಗಳಲ್ಲಿ ಹೂಡಿಕೆ: ಇ.ಡಿ.
ಮುಂಬೈ, ಎ.17: ವಿಜಯ ಮಲ್ಯ ಐಡಿಬಿಐ ಬ್ಯಾಂಕ್‌ನಿಂದ ಸಾಲ ಪಡೆದಿದ್ದ ರೂ. 950 ಕೋಟಿಗಳಲ್ಲಿ ಸುಮಾರು ಅರ್ಧದಷ್ಟನ್ನು ಭಾರತದ ಹೊರಗೆ ಆಸ್ತಿಗಳಲ್ಲಿ ಹೂಡಿದ್ದಾರೆ. ಅವರ ವಿರುದ್ಧದ ಹಣ ಚೆಲುವೆ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಶನಿವಾರ ವಿಶೇಷ ನ್ಯಾಯಾಲಯವೊಂದಕ್ಕೆ ಈ ವಿಷಯ ತಿಳಿಸಿದ್ದಾರೆ.
ಭಾರತದ ವಿವಿಧ ಬ್ಯಾಂಕ್‌ಗಳಿಗೆ ರೂ. 9,400 ಕೋಟಿಯಷ್ಟು ಸಾಲ ಬಾಕಿಯಿರಿಸಿರುವ ರಾಜ್ಯಸಭಾ ಸದಸ್ಯ ಮಲ್ಯರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹಾಗೂ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. ನ್ಯಾಯಾಲಯವು ಆದೇಶವನ್ನು ಸೋಮವಾರದ ತನಕ ಮೀಸಲಿರಿಸಿದೆ.
ಮಲ್ಯ, ವಿಮಾನ ಬಾಡಿಗೆ, ಬಿಡಿಭಾಗಗಳ ಆಮದು ಹಾಗೂ ವಿಮಾನ ದುರಸ್ತಿ ಸೇವೆಗಳ ಹೆಸರಿನಲ್ಲಿ, ಐಡಿಬಿಐ ಸಾಲದಿಂದ ರೂ. 430 ಕೋಟಿಯನ್ನು ಬೇರೆಡೆಗೆ ಸಾಗಿಸಿದ್ದಾರೆಂದು ಜಾರಿ ನಿರ್ದೇಶನಾಲಯದ ವಕೀಲ ಹಿತೇನ್ ವೆನೆಗಾಂವ್ಕರ್ ನ್ಯಾಯಾಲಯಕ್ಕೆ ತಿಳಿಸಿದರು. ಈ ಸಾಲವನ್ನು ಈಗ ನಿಷ್ಕ್ರಿಯಗೊಂಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ನೀಡಲಾಗಿತ್ತು.
ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಹಣದ ವ್ಯವಹಾರದ ಬಗ್ಗೆ ಜಾರಿ ನಿರ್ದೇಶನಾಲಯವು ಬ್ರಿಟನ್, ಫ್ರಾನ್ಸ್, ಅಮೆರಿಕ ಸಚಿವ ಹಲವು ದೇಶಗಳನ್ನು ಸಂಪರ್ಕಿಸಿದೆ. ಹಣವನ್ನು ವಿದೇಶಗಳ ತೆರಿಗೆ ಸ್ವರ್ಗಗಳಲ್ಲಿ ಇರಿಸಲಾಗಿದೆಯೆಂದು ಜಾರಿ ನಿರ್ದೇಶನಾಲಯದ ಕೆಲವು ಅಧಿಕಾರಿಗಳು ಶಂಕಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಹಣದ ಜಾಡಿನ ಬಗ್ಗೆ ತಾವು ಬೆಕ್ಕಸ ಬೆರಗಾಗಿದ್ದೇವೆ. ಸಾಲ ಪಡೆದ ಹಣದಲ್ಲಿ ಒಂದು ಭಾಗವನ್ನು ವಿದೇಶಗಳಲ್ಲಿ ಆಸ್ತಿ ಖರೀದಿಗೆ ಬಳಸಲಾಗಿದೆ. ಹಣವನ್ನು ಪಡೆದಿರುವ ದೊಡ್ಡ ಕುಳಗಳನ್ನು, ಅವರ ಬ್ಯಾಂಕ್ ವಿವರದೊಂದಿಗೆ ಗುರುತಿಸಲಾಗಿದೆ. ವ್ಯಾಪಾರಕ್ಕೆ ಸಂಬಂಧವೇ ಇಲ್ಲದ ಕಂಪೆನಿಗಳಿಗೆ ವಿವಿಧ ಮೊತ್ತಗಳನ್ನು ಪಾವತಿಸಲಾಗಿದೆಯೆಂದು ವೆನೆಗಾಂವ್ಕರ್ ಹೇಳಿದರು.
ಮಲ್ಯ, ಜಾರಿ ನಿರ್ದೇಶನಾಲಯದ ಪ್ರಶ್ನೆಗಳಿಗೆ ವೀಡಿಯೊ ಕಾನ್ಫರೆನ್ಸಿಂಗ್ ಅಥವಾ ಮೇಲ್‌ನ ಮೂಲಕ ಉತ್ತರಿಸುವ ಕೊಡುಗೆ ಮುಂದಿರಿಸಿದ್ದಾರೆ. ಆದರೆ, ಆರೋಪಿಯ ಅನುಕೂಲಕ್ಕೆ ತಕ್ಕಂತೆ ತನಿಖೆಯನ್ನು ಮುಂದುವರಿಸಲಾಗದು. ಆದುದರಿಂದ ಅವರ ಈ ಕೊಡುಗೆ ಅಂಗೀಕಾರಾರ್ಹವಲ್ಲವೆಂದು ಅವರು ತಿಳಿಸಿದರು.