ಬೆಳ್ತಂಗಡಿ: ಸೌದಿಯಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹ ತವರಿಗೆ
ಬೆಳ್ತಂಗಡಿ: ಎರಡು ತಿಂಗಳ ಹಿಂದೆ ಸೌದಿ ಅರೇಬಿಯಾದ ಜಿಝಾನ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಮದ್ದಡ್ಕ ನಿವಾಸಿ ಅಹಮ್ಮದ್ ಇಬ್ರಾಹಿಂ ಅವರ ಪುತ್ರ ಪಕ್ರುದ್ದೀನ್ ಅಹಮ್ಮದ್ ಅವರ ಮೃತದೇಹವನ್ನು 70 ದಿನಗಳ ಬಳಿಕ ಇದೀಗ ಹುಟ್ಟೂರಿಗೆ ತರಲಾಗುತ್ತಿದ್ದು ಸೋಮವಾರ ಬೆಳಿಗ್ಗೆ ಮೃತದೇಹ ಮದ್ದಡ್ಕದ ಮನೆಗೆ ತರಲಾಗುವುದು.
ಸೌದಿ ಅರೇಬಿಯಾದಲ್ಲಿ ರೆಡ್ ಟ್ಯಾಗ್ ಕಂಪೆನಿಯಲ್ಲಿ ಈತ ಕೆಲಸ ಮಾಡುತ್ತಿದ್ದ ರಾತ್ರಿ ಮಲಗಿದ್ದ ವೇಳೆ ಹೃದಯಾಘಾತದಿಂದ ಯುವಕ ಮೃತ ಪಟ್ಟಿದ್ದ. ಸೌದಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೋಲೀಸರು ತನಿಖೆ ನಡೆಸದೆ ಮೃತದೇಹವನ್ನು ಹಸ್ತಾಂತರ ಮಾಡಲು ಸಿದ್ದರಾಗಲಿಲ್ಲ ಇದೀಗ ತನಿಖೆ ಪೂರ್ಣಗೊಂಡಿದ್ದು ಹೃದಯಾಘಾತದಿಂದ ಮೃತ ಪಟ್ಟಿರುವುದು ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ಆತನ ಮರನದ ಬಗ್ಗೆ ಇದ್ದ ಅನುಮಾನಗಳು ನಿವಾರಣೆಯಾಗಿದೆ. ಇದೀಗ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.
ಭಾರತೀಯ ರಾಯಭಾರಿ ಕಚೇರಿಯ ಸಹಾಯದಿಂದ ವಿವಿಧ ಸ್ಥಳೀಯ ಸಮಾಜಸೇವಕರಾದ ಅಬ್ದುಲ್ ಸಮದ್ ಬಜ್ಪೆ, ಹನಿಫ್ ಮಂಜೇಶ್ವರ, ಸಲೀಂ ಗುರುವಾಯನಕೆರೆ, ಬಾವಾಕ, ಮುಂತಾದವರ ಸಹಕಾರದಿಂದ ಮೃತದೇಹವನ್ನು ಭಾರತಕ್ಕೆ ತರಲು ಸಾಧ್ಯವಾಗಿದ್ದು ಭಾನುವಾರ ಬೆಂಗಳೂರಿಗೆ ತರಲಾಗಿದ್ದು ಸೋಮವಾರ ಮದ್ದಡ್ಕದ ಮನೆಗೆ ತರಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.