×
Ad

ಗ್ರಾಮಸಭೆಗೆ ಸದಸ್ಯರ ಗೈರು: ಗ್ರಾಮಸ್ಥರ ಆಕ್ರೋಶ

Update: 2016-04-17 23:50 IST


ಉಪ್ಪಿನಂಗಡಿ, ಎ.17: ಗ್ರಾಮಸಭೆಗೆ ಗೈರು ಹಾಜರಾದ ಗ್ರಾಪಂ ಸದಸ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವಂತೆ ಕರ್ವೆಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೆರ್ನೆ ಪಂಚಾಯತ್‌ನ ಗ್ರಾಮ ಸಭೆಯಲ್ಲಿ ನಿರ್ಣಯ ಮಂಡಿಸಲಾಯಿತು.
  ಗ್ರಾಪಂ ಅಧ್ಯಕ್ಷೆ ಭಾರತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾಯಿತ 15 ಸದಸ್ಯರ ಪೈಕಿ 7ಮಂದಿ ಗೈರುಹಾಜರಾಗಿದ್ದರು. ಇದನ್ನು ಗ್ರಾಮಸ್ಥ ಕಬೀರ್ ಪ್ರಸ್ತಾಪಿಸಿದರು. ಇದಕ್ಕೆ ಗ್ರಾಮಸ್ಥರಾದ ಚೆನ್ನಕೇಶವ, ಸುಂದರ, ಮುಹಮ್ಮದ್ ಕರ್ವೇಲ್ ಧ್ವನಿಗೂಡಿಸಿ ಸಭೆ ನಡೆಸುವುದರ ಔಚಿತ್ಯವನ್ನು ಪ್ರಶ್ನಿಸಿದರು. ಈ ಬಗ್ಗೆ ಭಾರೀ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಮಧ್ಯಪ್ರವೇಶಿಸಿದ ನೋಡೆಲ್ ಅಧಿಕಾರಿ ದಿನೇಶ್, ಈಗ ನಡೆಯುತ್ತಿರುವುದು 2015-16ನೆ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ. ಸಭೆಗೆ ಕೆಲವು ಸದಸ್ಯರು ಕೆಲವೊಂದು ಕಾರಣಗಳಿಂದ ಗೈರು ಹಾಜರಿಯಾಗಿದ್ದಾರೆ. ಸಭೆಯಲ್ಲಿರುವ ಸದ ಸ್ಯರು ವೇದಿಕೆಗೆ ಬಾರದೇ ಇರುವುದು ಅವರ ವೈಯಕ್ತಿಕ ವಿಚಾರ. ಈ ಬಗ್ಗೆ ಮೇಲಾ ಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಇದರಿಂದ ಸಮಾಧಾನಗೊಳ್ಳದ ಗ್ರಾಮಸ್ಥರು ಗೈರು ಹಾಜರಾಗಿರುವ ಸದಸ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದರು. *ಮರಳು ಕೊರತೆ, ಗದ್ದಲ: ಅಂಬೇಡ್ಕರ್, ಅಶ್ರಯ, ಬಸವ ವಸತಿ ಯೋಜನೆಗಳಲ್ಲಿ ಮಂಜೂರುಗೊಂಡಿರುವ ಮನೆಗಳನ್ನು ಆರು ತಿಂಗಳೊಳಗೆ ಪೂರ್ತಿ ಗೊಳಿಸಬೇಕಾಗಿದೆ. ಆದರೆ ಕಾಮಗಾರಿ ನಿರ್ವಹಿಸಲು ಮರಳು ಸಿಗುತ್ತಿಲ್ಲ. ಬಡವರು ಮನೆ ಕಟ್ಟುವುದು ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಅಬ್ದುರ್ರಝಾಕ್ 2012-13ರಲ್ಲಿ ಮರಳು ಸಾಗಾಟಕ್ಕೆ ಪಂಚಾಯತ್‌ನಿಂದ ಅನುಮತಿ ನೀಡುತ್ತಿದ್ದೇವೆ. ಆದರೆ ಈಗ ಗಣಿ ಇಲಾಖೆಯಿಂದ ಪರವಾನಿಗೆ ಪಡೆದು ಕೊಳ್ಳುವುದು ಕಡ್ಡಾಯವಾಗಿದೆ. ವಸತಿ ಯೋಜನೆಗಳ ಫಲಾನುಭವಿಗಳು ಪಿಕಪ್‌ನಲ್ಲಿ ಮರಳು ಸಾಗಾಟಕ್ಕೆ ಆಕ್ಷೇಪವಿಲ್ಲ ಎಂದು ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು. ಶಿಕ್ಷಕರ ನೇಮಕಗೊಳಿಸಿ: ಕರ್ವೆಲ್ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಮುಂದಿನ ಶೈಕಣಿಕ ವರ್ಷದಿಂದ ಇಲ್ಲಿಗೆ 3 ಜನ ಶಿಕ್ಷಕರ ನೇಮಕ ಮಾಡಬೇಕು. ಅಲ್ಲದೇ ಇಲ್ಲಿರುವ ಅಡುಗೆಯವರು ಸರಿ ಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇವರನ್ನು ಕೂಡ ಬದಲಾವಣೆ ಮಾಡಬೇಕು. ಮುಂದಿನ ಶೈಕ್ಷಣಿಕ ವರ್ಷದ ತರಗತಿಗಳು ಆರಂಭಗೊಳ್ಳುವ ಮುನ್ನ ಈ ಬೇಡಿಕೆ ಈಡೇರಿಸದಿದ್ದಲ್ಲಿ ಶಾಲೆಯ ಬೀಗ ತೆರೆ ಯಲು ಅವಕಾಶ ನೀಡುವುದಿಲ್ಲ ಎಂದು ಎಸ್‌ಡಿಎಂಸಿ ಸದಸ್ಯ ರಝಾಕ್ ಮತ್ತಿತರರು ಎಚ್ಚರಿಕೆ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಐರಿನ್ ಮಸ್ಕರೇನಸ್, ಸದಸ್ಯರಾದ ಗಿರಿಜಾ, ಅಬ್ದುಲ್ ಶಾಫಿ, ಸುನೀಲ್, ನೆಲ್ಸನ್ ಪಿಂಟೊ, ಗೀತಾ, ಗ್ರಾಪಂ ಮಾಜಿ ಸದಸ್ಯ ಗೋಪಾಲ ಸಪಲ್ಯ ಚರ್ಚೆಯಲ್ಲಿ ಪಾಲ್ಗೊಂಡರು.
ತೋಟಗಾರಿಕೆ ಇಲಾಖೆ ಬಂಟ್ವಾಳ ತಾಲೂಕು ಸಹಾಯಕ ನಿರ್ದೇಶಕ ದಿನೇಶ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.ಆರೋಗ್ಯ ಸಹಾಯಕಿ ಶೀಲಾ, ಜಿಪಂ ಇಂಜಿನಿಯರ್ ಪರವಾಗಿ ಇಲಾಖೆ ಸಿಬ್ಬಂದಿ ಕರುಣಾಕರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸೋಮಕ್ಕ, ಪಶುವೈದ್ಯಾಧಿಕಾರಿ ಕಿರಣ್ ಕುಮಾರ್, ಮೆಸ್ಕಾಂ ಜೆಇ ದಿನೇಶ್, ಗ್ರಾಮ ಕರಣಿಕ ಅನಿಲ್ ಕುಮಾರ್, ಸಿಆರ್‌ಪಿ ಸುಧಾಕರ್ ಇಲಾಖಾವಾರು ಮಾಹಿತಿ ನೀಡಿದರು. ಪ್ರಭಾರ ಪಿಡಿಒ ಕವಿತಾ ಸ್ವಾಗತಿಸಿದರು. ಸಿಬ್ಬಂದಿ ಜತ್ತಪ್ಪವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News