×
Ad

21ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ಶಂಕುಸ್ಥಾಪನೆ

Update: 2016-04-18 16:49 IST

ಮಂಗಳೂರು, ಎ.18: ಶಕ್ತಿನಗರದ ಮಾಂಡ್ ಸೊಭಾಣ್ ವತಿಯಿಂದ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೊಂಕಣಿ ಮ್ಯೂಸಿಯಂಗೆ ಎ.21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಗುಜರಾತ್‌ನಿಂದ ತ್ರಿವೇಂಡ್ರಮ್‌ವರೆಗಿನ ಕೊಂಕಣಿ ಸಮುದಾಯಗಳ ವಿಭಿನ್ನ ಜಾತಿ, ಸಮುದಾಯ, ಉಪ ಭಾಷೆಗಳು, ಸಾಂಸ್ಕೃತಿಕ ವೈವಿಧ್ಯವನ್ನು ಪ್ರತಿಬಿಂಬಿಸುವ ಹಾಗೂ ಸಂಶೋಧನಾ ಕೇಂದ್ರವಾಗಿ ಈ ಮ್ಯೂಸಿಯಂ ರಚನೆಯಾಗಲಿದೆ ಎಂದು ಹೇಳಿದರು.

ಶಕ್ತಿನಗರದ 1 ಎಕರೆ ಜಾಗದಲ್ಲಿ ಮ್ಯೂಸಿಯಂ ನಿರ್ಮಾಣವಾಗಲಿದ್ದು, ಇದಕ್ಕಾಗಿ ರಾಜ್ಯ ಸರಕಾರವು 2016-17 ನೇ ಬಜೆಟ್‌ನಲ್ಲಿ 2.5 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಮುಂದಿನ ಬಜೆಟ್‌ನಲ್ಲಿ ಮತ್ತೆ 2.5 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದೆ. ಕೇಂದ್ರ ಸರಕಾರದಲ್ಲಿಯೂ ಮ್ಯೂಸಿಯಂ ರಚನೆಗೆ ಅನುದಾನ ನೀಡಲು ಅವಕಾಶವಿದ್ದು, ನೆರವು ಕೋರಲಾಗುವುದು. ಗೋವಾ, ತಮಿಳುನಾಡು ಸೇರಿದಂತೆ ಕೊಂಕಣಿ ಸಮುದಾಯ ಹೆಚ್ಚಾಗಿರುವ ಇತರ ರಾಜ್ಯಗಳಿಂದಲೂ ಅನುದಾನಕ್ಕೆ ಪ್ರಯತ್ನಿಸಲಾಗುವುದು. ಅಂತಾರಾಷ್ಟ್ರೀಯ ಹಾಗೂ ಪ್ರವಾಸೋದ್ಯಮ ತಾಣವಾಗಿ ಈ ಮ್ಯೂಸಿಯಂನ್ನು ಪರಿವರ್ತಿಸುವ ಉದ್ದೇಶ ಹೊಂದಿರುವುದರಿಂದ ಯುನೆಸ್ಕೋದ ನೆರನ್ನು ಕೂಡಾ ಕೋರಲಾಗುವುದು.

ಶಿಲ್ಲಾಂಗ್‌ನಲ್ಲಿರುವ ಈಶಾನ್ಯ ರಾಜ್ಯಗಳ ಬೃಹತ್ ರಾಷ್ಟ್ರೀಯ ಮ್ಯೂಸಿಯಂನ ಪ್ರೇರಣೆಯ ಮೇರೆಗೆ ರಚಿಸಲಾಗುತ್ತಿರುವ ಈ ಮ್ಯೂಸಿಯಂನಲ್ಲಿ ಡಿಜಿಟಲ್ ಡಾಕ್ಯುಮೆಂಟೇಶನ್, ಹಬ್ಬ, ಆಚಾರ ವಿಚಾರ ಸೇರಿದಂತೆ ಕೊಂಕಣಿ ಭಾಷಿಗರ ಸಮಸ್ತ ಜೀವನ ಶೈಲಿಯನ್ನು ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಾಗುವುದು. ಸುಮಾರು 3 ವರ್ಷಗಳ ಅವಧಿಯೊಳಗೆ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಮ್ಯೂಸಿಯಂಗಾಗಿ ಈಗಾಗಲೇ ಕೊಂಕಣಿ ಸಮುದಾಯ 37 ಮಂದಿ ದಾನಿಗಳು 4 ಕೋಟಿ ರೂ.ಗಳ ಸಹಾಯವನ್ನು ನೀಡಿದ್ದಾರೆ ಎಂದು ಅರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಅರ್.ವಿ.ದೇಶಪಾಂಡೆ, ಬಿ.ರಮಾನಾಥ್ ರೈ, ಉಮಾಶ್ರೀ, ಯು.ಟಿ.ಖಾದರ್, ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಅಧ್ಯಕ್ಷ ಲುವಿ ಜೆ.ಪಿಂಟೋ, ಸಂಘಟಕ ಸ್ಟ್ಯಾನಿ ಆಲ್ವಾರಿಸ್, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್, ೋಶಾಧಿಕಾರಿ ಕ್ಲಾರಾ ಡಿಕುನ್ಹಾ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News