ಬಿಯರ್ ಸೇವನೆ ನಮ್ಮ ಸಂಸ್ಕೃತಿಯಲ್ಲ,ಮೊದಲು ಪ್ರಾಣಗಳನ್ನುಳಿಸಲು ನೀರನ್ನು ಬಳಸಿ:ಶಿವಸೇನೆ

Update: 2016-04-18 12:01 GMT

ಮುಂಬೈ,ಎ.18: ನೀರಿನ ಬದಲು ಬಿಯರ್ ಕುಡಿಯುವುದು ನಮ್ಮ ಸಂಸ್ಕೃತಿಯಲ್ಲ ಎಂದು ಶಿವಸೇನೆಯು ಸೋಮವಾರ ಹೇಳಿದೆ. ಮರಾಠವಾಡಾ ಪ್ರದೇಶದ ಬರಪೀಡಿತ ಔರಂಗಾಬಾದ್‌ನಲ್ಲಿಯ ಬಿಯರ್ ತಯಾರಿಕೆ ಘಟಕಗಳಿಗೆ ನೀರಿನ ಪೂರೈಕೆಯನ್ನು ನಿಲ್ಲಿಸುವಂತೆ ಪಕ್ಷದ ಅಧ್ಯಕ್ಷ ಉದ್ಧವ ಠಾಕ್ರೆ ಅವರು ಎರಡು ದಿನಗಳ ಹಿಂದೆ ಸರಕಾರವನ್ನು ಆಗ್ರಹಿಸಿದ್ದರು.

ಕೈಗಾರಿಕಾ ಘಟಕಗಳಿಗೆ ಅವುಗಳಿಗಾಗಿಯೇ ನಿಗದಿಗೊಳಿಸಿರುವ ಕೋಟಾದಿಂದ ನೀರನ್ನು ಪೂರೈಸಲಾಗುತ್ತಿದೆ ಎಂಬ ಹೇಳಿಕೆಗಾಗಿ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವೆ ಪಂಕಜಾ ಮುಂಢೆ ಅವರನ್ನು ಪರೋಕ್ಷವಾಗಿ ತರಾಟೆಗೆತ್ತಿಕೊಂಡಿರುವ ಸೇನೆಯು, ಕೈಗಾರಿಕಾ ಘಟಕಗಳಿಗಿಂತ ಮಾನವ ಜೀವಗಳನ್ನು ರಕ್ಷಿಸಲು ಹೆಚ್ಚಿನ ಆದ್ಯತೆ ನೀಡಬೇಕೆನ್ನುವುದು ಜನತೆಯ ಅಭಿಪ್ರಾಯವಾಗಿದೆ ಎಂದು ಹೇಳಿದೆ.

ಮರಾಠವಾಡಾದಲ್ಲಿ ಬಿಯರ್ ತಯಾರಿಸುವ 10 ದೊಡ್ಡ ಕಾರ್ಖಾನೆಗಳಿವೆ. ಪ್ರಚಲಿತ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅವುಗಳಿಗೆ ನೀರು ಪೂರೈಕೆಯನ್ನು ಶೇ.20ರಷ್ಟು ಕಡಿತಗೊಳಿಸಲಾಗಿದೆ. ಆದರೆ ಸಾವಿರಾರು ಜನರ ಬದುಕುಗಳು ಈ ಕಾರ್ಖಾನೆಗಳನ್ನು ಅವಲಂಬಿಸಿರುವುದರಿಂದ ಇವುಗಳನ್ನೂ ಉಳಿಸುವ ಅಗತ್ಯವಿದೆ. ಸರಕಾರವು ತಕ್ಷಣವೇ ಏನಾದರೊಂದು ಮಧ್ಯಂತರ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಪಕ್ಷದ ಮುಖವಾಣಿ ‘ಸಾಮನಾ ’ ತನ್ನ ಸಂಪಾದಕೀಯದಲ್ಲಿ ಹೇಳಿದೆ.

  ಪ್ರಸಕ್ತ ನೀರನ್ನು ಜನರ ಜೀವಗಳನ್ನು ರಕ್ಷಿಸಲು ಮಾತ್ರ ಬಳಸಬೇಕು ಎನ್ನುವುದನ್ನು ಸರಕಾರವು ಅರ್ಥ ಮಾಡಿಕೊಳ್ಳಬೇಕಿದೆ ಎಂದಿದೆ.
ನೀರಿನ ಬದಲು ಬಿಯರ್ ಕುಡಿಯುವುದು ನಮ್ಮ ಸಂಸ್ಕೃತಿಯಲ್ಲ ಮತ್ತು ಬರಪೀಡಿತ ಪ್ರದೇಶಗಳಲ್ಲಿಯ ಜನರು ಕುಡಿಯುವ ನೀರಿನ ಬಾಟಲ್‌ಗಳನ್ನು ಖರೀದಿಸುವ ಸ್ಥಿತಿಯಲ್ಲಿಲ್ಲ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News