×
Ad

ಮಂಗಳೂರು : ಕಪ್ಪು ಬಟ್ಟೆ ಪ್ರದರ್ಶಕ್ಕೆ ನಡೆಯುತ್ತಿದೆಯೇ ತಂತ್ರ?

Update: 2016-04-18 17:48 IST

ಮಂಗಳೂರು, ಎ, 18 : ಮಂಗಳೂರು ಸಮೀಪದ ಪಡೀಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮಿನಿ ವಿಧಾನ ಸೌಧ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲನ್ಯಾಸಕ್ಕೆ ಗುರುವಾರ (ಎ.21ರಂದು) ಮಂಗಳೂರಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಎತ್ತಿನಹೊಳೆ ಯೋಜನೆಯ ವಿರೋಧದ ಬಿಸಿ ತಟ್ಟಲಿದೆಯೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದ ವೇಳೆ ಅನುಷ್ಠಾನಕ್ಕೆ ಬಂದ ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧ ಅಂದು ಪ್ರತಿಪಕ್ಷ ಸ್ಥಾನದಲ್ಲಿದ್ದ ಸಿದ್ದರಾಮಯ್ಯರವರೇ ಧ್ವನಿ ಎತ್ತಿದ್ದರು. ಆದರೆ, ಬಿಜೆಪಿ ಬಳಿಕ ಅಧಿಕಾರ ಹಿಡಿದ ಸಿದ್ದರಾಮಯ್ಯ ಸರಕಾರ ಈ ಯೋಜನೆಯನ್ನು ಮುಂದುವರಿಸಿದೆ. ಇದು ಸಹಜವಾಗಿಯೇ ಪರಿಸರವಾದಿಗಳ ಕೆಂಗಣ್ಣಿಗೆ ಸಿದ್ದರಾಮಯ್ಯ ಗುರಿಯಾಗುವಂತಾಗಿದೆ. 13 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ವ್ಯಹಿಸಿ ನಡೆಯುತ್ತಿರುವ ಯೋಜನೆಯನ್ನು ಕೈ ಬಿಡಬೇಕೆಂದು ಪರಿಸರವಾದಿಗಳು ಸರಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದರು. ಈ ಯೋಜನೆಯಿಂದ ಬಯಲು ಸೀಮೆಗೆ ಉದ್ದೇಶಿಸಿದಷ್ಟು ನೀರು ದೊರೆಯುವುದಿಲ್ಲಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಜೀವ ನದಿ ನೇತ್ರಾವತಿಯೂ ಬರುಡಾಗುವ ಅಪಾಯವಿದೆ ಎಂದು ಪರಿಸರವಾದಿಗಳು ಸರಕಾರಕ್ಕೆ ಎಚ್ಚರಿಸುತ್ತಾ ಬಂದಿದ್ದರು. ಅಲ್ಲದೆ ಯೋಜನೆಯನ್ನು ವಿರೋಧಿಸಿ ಜಿಲ್ಲೆಯಾದ್ಯಂತ ಹತ್ತು ಹಲವು ಪ್ರತಿಭಟನೆಗಳು ಕೂಡಾ ನಡೆದಿದ್ದವು. ಆದರೆ ಇದ್ಯಾವುದಕ್ಕೂ ಕ್ಯಾರೇ ಎನ್ನದ ಸರಕಾರ ಯೋಜನೆಯನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಪರಿಸರವಾದಿ ಸಂಘಟನೆಗಳು ಜಿಲ್ಲೆಗೆ ಆಗಮಿಸುವ ಕೇಂದ್ರ ಹಾಗೂ ರಾಜ್ಯ ಸರಕಾರದ ಹಾಲಿ, ಮಾಜಿ ಸಚಿವರ ಹಾಗೂ ರಾಜ್ಯಕೀಯ ಧುರೀಣರ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು. ಅದರಂತೆ ಈ ಹಿಂದೆ ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಮಾಜಿ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶಿಸಿ, ಧಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಮುಂದುವರಿದ ಭಾಗವಾಗಿ ಗುರುವಾರ ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗೂ ಕಪ್ಪು ಬಟ್ಟೆ ಪ್ರದರ್ಶಿಸಿ ಯೋಜನೆ ವಿರುದ್ಧದ ಜಿಲ್ಲೆಯ ಜನರ ಆಕ್ರೋಶದ ಬಿಸಿ ತಟ್ಟಿಸಲು ಪರಿಸರವಾದಿ ಸಂಘಟನೆಗಳು ತೀರ್ಮಾನಿಸಿದೆ ಎಂಬ ಗುಮಾಣಿ ಕೇಳಿ ಬಂದಿದೆ. ಮಂಗಳೂರಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಜೀಪಮೂಡ ಸುಭಾಶ್‌ನಗರ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರ ಲೋಕಾರ್ಪಣೆಗೆ ಬಂಟ್ವಾಳ ತಾಲೂಕಿಗೂ ಆಗಮಿಸಲಿದ್ದಾರೆ. ಎತ್ತಿನ ಹೊಳೆ ಯೋಜನೆಯ ವಿರುದ್ಧ ಹತ್ತು ಹಲವು ಪ್ರತಿಭಟನೆ, ಧರಣಿ, ಮುತ್ತಿಗೆ ನಡೆಯುವ ಮೂಲಕ ಜಿಲ್ಲೆಯಲ್ಲಿ ಸುದ್ದಿಯಾದ ಬಂಟ್ವಾಳ ತಾಲೂಕಿನಲ್ಲೂ ಸಿದ್ದರಾಮಯ್ಯರಿಗೆ ಕಪ್ಪು ಬಟ್ಟೆ ಪ್ರದರ್ಶಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ವಿಶೇಷವೆಂದರೆ ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗೆ ಕಪ್ಪು ಬಟ್ಟೆ ಪ್ರದರ್ಶಿಸದಂತೆ ಮಾಡಲು ಕಾಂಗ್ರೆಸ್ ಪಕ್ಷದ ಮುಖಂಡರು ಒಂದೆಡೆ ಪ್ರಯತ್ನ ಪಟ್ಟರೆ, ಮುಖ್ಯಮಂತ್ರಿಗೆ ಕಪ್ಪು ಬಟ್ಟೆ ಪ್ರದರ್ಶಿಸಲು ಎತ್ತಿನ ಹೊಳೆ ಯೋಜನೆ ವಿರೋಧಿ ಸಂಘಟನೆಗಳ ನಾಯಕರಿಗೆ ಬಿಜೆಪಿ ಸಾಥ್ ನೀಡುತ್ತಿರುವ ಬಗ್ಗೆಯೂ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News