×
Ad

ಉಪ್ಪಿನಂಗಡಿ: ಸಹಕಾರಿ ಸಂಸ್ಥೆಗಳು ರೈತರಿಗೆ ಬೆಂಗಾವಲಾಗಿ ನಿಲ್ಲಬೇಕು-ಸಂಜೀವ ಮಠಂದೂರು

Update: 2016-04-18 19:20 IST

ಉಪ್ಪಿನಂಗಡಿ: ಕಾರ್ಮಿಕರ ಕೊರತೆ, ಕಾಡು ಪ್ರಾಣಿಗಳ ಹಾವಳಿ, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಹತ್ತು ಹಲವು ಕಾರಣಗಳಿಂದಾಗಿ ಬೆಳೆನಾಶದಿಂದ ರೈತನಿಂದು ಕಂಗಾಲಾಗಿದ್ದು, ಕೃಷಿ ಕ್ಷೇತ್ರದಿಂದ ಹೊರಬರುತ್ತಿದ್ದಾನೆ. ಇಂತಹ ಸನ್ನಿವೇಶದಲ್ಲಿ ಸಹಕಾರಿ ಸಂಸ್ಥೆಗಳು ರೈತರಿಗೆ ಬೆಂಗಾವಲಾಗಿ ನಿಲ್ಲಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ತಿಳಿಸಿದರು.
ಉಪ್ಪಿನಂಗಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಹಿರೇಬಂಡಾಡಿ ಶಾಖಾ ಕಚೇರಿ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ರೈತರು ಕೃಷಿಯಿಂದ ವಿಮುಖರಾಗದೆ ಲಾಭದಾಯಕ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಉತ್ತಮ ಲಾಭ ಗಳಿಸಬೇಕು. ಅಲ್ಲದೇ, ಸಹಕಾರಿ ಸಂಸ್ಥೆಗಳಲ್ಲಿ ಸದಸ್ಯರಾಗಿ ತಮ್ಮ ಕೃಷಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಮೂಲಕ ಆರ್ಥಿಕ ಸ್ವಾವಲಂಬನೆಯ ದಾರಿ ಕಂಡುಕೊಳ್ಳಬೇಕು ಎಂದರು.
ಉಪ್ಪಿನಂಗಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಯಶವಂತ ಜಿ. ಮಾತನಾಡಿ, ಇಲ್ಲಿನ ಸಿಎ ಬ್ಯಾಂಕ್ ಉಪ್ಪಿನಂಗಡಿಯನ್ನು ಕೇಂದ್ರೀಕರಿಸಿ ಇಲ್ಲಿನ ಸುತ್ತಮುತ್ತಲ ಗ್ರಾಮಗಳಲ್ಲಿ ತನ್ನ ಸೇವೆ ನೀಡುತ್ತಿದ್ದು, ಇದನ್ನು ಇನ್ನಷ್ಟು ವಿಸ್ತರಿಸಬೇಕಿದೆ. ಇದಕ್ಕೆ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಶ್ರಮ ಅತ್ಯಗತ್ಯ ಎಂದರು.
ಉಪ್ಪಿನಂಗಡಿ ಸಿಎ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ರಘುವೀರ್ ಮಾತನಾಡಿ, ಹಿರೇಬಂಡಾಡಿಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಸಿಎ ಬ್ಯಾಂಕ್‌ನ ಶಾಖಾ ಕಚೇರಿ ನಿರ್ಮಾಣಗೊಳ್ಳಲಿದ್ದು, ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸುವ ಯೋಜನೆ ರೂಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಎ ಬ್ಯಾಂಕ್‌ನ ಆಡಳಿತ ಮಂಡಳಿಯ ಉಪಾಧ್ಯಕ್ಷ ಯತೀಶ್ ಶೆಟ್ಟಿ ಸುವ್ಯ, ನಿರ್ದೇಶಕರಾದ ಸುಜಾತ ರೈ, ಜಗದೀಶ್ ರಾವ್, ಪ್ರಸಾದ್ ಕಾಯರ್‌ಪಾಡಿ, ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಪ್ರಕಾಶ್ ರೈ, ಮಾಜಿ ಉಪಾಧ್ಯಕ್ಷ ಮಾಧವ ಗೌಡ, ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ, ಸದಸ್ಯರಾದ ನಿತಿನ್, ಸದಾನಂದ ಶೆಟ್ಟಿ, ಹಿರೇಬಂಡಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ, ಸ್ಥಳೀಯರಾದ ಕುಂಞಿಣ್ಣ ಶೆಟ್ಟಿ, ನಂದಕುಮಾರ್, ಕೇಂದ್ರ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಕೊರಗಪ್ಪ ಗೌಡ, ಶರತ್ ಉಪಸ್ಥಿತರಿದ್ದರು. ಸಿಎ ಬ್ಯಾಂಕ್ ಸಿಬ್ಬಂದಿ ಪುಷ್ಪರಾಜ್ ಶೆಟ್ಟಿ ಅಡೆಕಲ್‌ಲ್ ಸ್ವಾಗತಿಸಿದರು. ಪ್ರವೀಣ್ ಆಳ್ವ ವಂದಿಸಿದರು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ -ಮಹಾಕಾಳಿ ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News