×
Ad

ಎರಡು ಬರಪೀಡಿತ ಗ್ರಾಮಗಳನ್ನು ದತ್ತು ಪಡೆದ ‘ದೇಶವಿರೋಧಿ’ ಆಮಿರ್ ಖಾನ್

Update: 2016-04-18 23:24 IST

ಮುಂಬೈ,ಎ.18: ತಥಾಕಥಿತ ಹಿಂದುತ್ವ ಪ್ರತಿಪಾದಕರಿಂದ ‘ದೇಶವಿರೋಧಿ’ಎಂದು ಕರೆಸಿಕೊಂಡಿದ್ದ ಬಾಲಿವುಡ್ ನಟ ಆಮಿರ್ ಖಾನ್ ಅವರು ಮಹಾರಾಷ್ಟ್ರದ ಎರಡು ಬರಪೀಡಿತ ಗ್ರಾಮಗಳನ್ನು ದತ್ತು ಪಡೆದುಕೊಂಡಿದ್ದಾರೆ. ತನ್ಮೂಲಕ ಗ್ರಾಮಸ್ಥರ ಹತಾಶೆಯನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಗ್ರಾಮಸ್ಥರಿಗೆ ಜಲ ಸಂರಕ್ಷಣೆಯ ತಂತ್ರಜ್ಞಾನವನ್ನು ಕಲಿಸಲು ಮಹಾರಾಷ್ಟ್ರದ ಬರಪೀಡಿತ ಪ್ರದೇಶಗಳನ್ನು ಸುತ್ತುತ್ತಿರುವ ‘ಲಗಾನ್’ ನಟ ತಾಲ್ ಮತ್ತು ಕೋರೆಗಾಂವ್ ಗ್ರಾಮಗಳನ್ನು ದತ್ತು ಪಡೆದುಕೊಂಡಿದ್ದಾರೆ. ಆಮಿರ್ ಈ ಹಿಂದೆ 2001ರ ಭೂಕಂಪದಲ್ಲಿ ನಾಮಾವಶೇಷಗೊಂಡಿದ್ದ ಗುಜರಾತ್‌ನ ಭುಜ್ ಜಿಲ್ಲೆಯಲ್ಲಿನ ಗ್ರಾಮವೊಂದನ್ನು ದತ್ತು ಪಡೆದಿದ್ದರು.

ಕೆಲವೇ ಸಮಯದ ಹಿಂದೆ ಇದೇ ಆಮಿರ್‌ಗೆ ದೇಶವಿರೋಧಿ ಎಂಬ ಹಣೆಪಟ್ಟಿಯನ್ನು ಹಚ್ಚಲಾಗಿತ್ತು. ಹಲವು ಬಿಜೆಪಿ ನಾಯಕರು ಭಾರತವನ್ನು ತೊರೆಯುವಂತೆ ಮತ್ತು ಪಾಕಿಸ್ಥಾನದಲ್ಲಿ ಆಶ್ರಯ ಪಡೆದುಕೊಳ್ಳುವಂತೆ ಅವರಿಗೆ ಫುಕ್ಕಟೆ ಸಲಹೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ತಲೆದೋರಿರುವ ಗಂಭೀರ ಜಲ ಬಿಕ್ಕಟ್ಟಿನ ಸಂತ್ರಸ್ತರಿಗೆ ನೆರವಾಗುವ ಅವರ ದೃಢ ನಿರ್ಧಾರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ತನ್ನ ಇಡೀ ‘ಸತ್ಯಮೇವ ಜಯತೆ’ ತಂಡದೊಂದಿಗೆ ದಣಿವನ್ನೂ ಲೆಕ್ಕಿಸದೆ ಬರಪೀಡಿತ ಪ್ರದೇಶಗಳಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.  ಆಮಿರ್ ಅವರ ಪಾನಿ ಫೌಂಡೇಷನ್ ಸತ್ಯಮೇವ ಜಯತೆ ವಾಟರ್ ಕಪ್ ಆರಂಭಿಸಿದ್ದು, ತನ್ಮೂಲಕ ಮೂರು ಜಿಲ್ಲೆಗಳಲ್ಲಿನ ಗ್ರಾಮಗಳಲ್ಲಿ ಜಲ ಸಂರಕ್ಷಣೆ ತಂತ್ರಜ್ಞಾನವನ್ನು ತಿಳಿಸಿಕೊಡುವಲ್ಲಿ ವ್ಯಸ್ತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News