×
Ad

ಮಗನಿಂದ ತಾಯಿಗೆ ಆಸ್ತಿಯಲ್ಲಿ ವಂಚನೆ: ಆರೋಪ

Update: 2016-04-19 00:05 IST

ಉಡುಪಿ, ಎ.18: ಮಗನಿಂದಲೇ ವಂಚನೆಗೆ ಒಳಗಾದ ಕಡಿಯಾಳಿ ಕಟ್ಟೆ ಆಚಾರ್ಯರ ಮಾರ್ಗದ ನಿವಾಸಿ ಸಾವಿತ್ರಿ ಭಟ್‌ರಿಗೆ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಡಿ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಕೋರ್ಟ್ ಆದೇಶ ನೀಡಿ ಎರಡು ವರ್ಷಗಳಾದರೂ ಇನ್ನೂ ನ್ಯಾಯ ದೊರಕಿಲ್ಲ ಎಂದು ಸಾವಿತ್ರಿ ಭಟ್ ಅವರ ಎರಡನೆ ಮಗ ಸುಬ್ರಹ್ಮಣ್ಯ ಭಟ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2008ರಲ್ಲಿ ಸಾವಿತ್ರಿ ಭಟ್ ತನ್ನ ಎಂಟು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡಿ, ನಾಲ್ಕು ಸೆಂಟ್ಸ್ ಜಾಗ ಹಾಗೂ ಮನೆಯನ್ನು ತನ್ನಲ್ಲಿಯೇ ಇಟ್ಟುಕೊಂಡಿದ್ದರು. ಆದರೆ ಏಳನೆ ಮಗ ಕೇಶವ ಭಟ್ ಆಸ್ತಿಯಲ್ಲಿ ಪಾಲು ಪಡೆದುಕೊಂಡರೂ ವಂಚನೆಯಿಂದ ತಾಯಿ ಹೆಸರಿನಲ್ಲಿದ್ದ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದನು.

ಇದರ ವಿರುದ್ಧ ಸಾವಿತ್ರಿ ಭಟ್ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೂಲಕ ಸಹಾಯಕ ಕಮಿಷನರ್‌ರ ಕೋರ್ಟಿನಲ್ಲಿ ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆಯಡಿ ದೂರು ಸಲ್ಲಿಸಿದರು. ಈ ಕುರಿತು 2014ರ ಜೂ.26ರಂದು ತೀರ್ಪು ನೀಡಿದ ಸಹಾಯಕ ಕಮಿಷನರ್ ಆ ಆಸ್ತಿಯನ್ನು ಮರಳಿ ಸಾವಿತ್ರಿ ಭಟ್ ಅವರ ಹೆಸರಿಗೆ ವರ್ಗಾಯಿಸಬೇಕು ಎಂದು ಆದೇಶ ನೀಡಿದರು.

ಅದರಂತೆ ಈಗ ಆಸ್ತಿ ಸಾವಿತ್ರಿ ಭಟ್‌ರ ಹೆಸರಿಗೆ ವರ್ಗಾವಣೆಯಾಗಿದೆ. ಆದರೆ ಕೇಶವ ಭಟ್ ಅದೇ ಮನೆಯ ಮಹಡಿಯಲ್ಲಿ ವಾಸವಾಗಿದ್ದಾನೆ. ಇದೇ ವಿಚಾರದಲ್ಲಿ ತಾಯಿಗೆ ಚಿತ್ರಹಿಂಸೆ ನೀಡುತ್ತಿದ್ದಾನೆ. ಕೇಶವ ಭಟ್‌ಗೆ ಮಾಜಿ ಗೃಹ ಸಚಿವರ ಪತ್ನಿ ಶಾಂತಾ ಆಚಾರ್ಯ ಬೆಂಬಲವಾಗಿ ನಿಂತಿದ್ದಾರೆ. ಈತ ಇವರ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ಪೊಲೀಸರು ಕೂಡ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸುಬ್ರಹ್ಮಣ್ಯ ಭಟ್ ದೂರಿದರು.

ರಾಜಕೀಯ ಒತ್ತಡ ಹಾಗೂ ಲ್ಯಾಂಡ್ ಮಾಫಿಯಾದ ಕಾರಣಕ್ಕಾಗಿ ಕೇಶವ ಭಟ್ ಮನೆಯನ್ನು ಬಿಟ್ಟು ಕೊಡುತ್ತಿಲ್ಲ. ಸಹಾಯಕ ಕಮಿಷನರ್ ಆದೇಶ ಬಂದು ಎರಡು ವರ್ಷಗಳಾದರೂ ಸಾವಿತ್ರಿ ಭಟ್‌ಗೆ ನ್ಯಾಯ ಸಿಕ್ಕಿಲ್ಲ. ಕೇಶವ ಭಟ್‌ಗೆ ಬೇರೆ ಕಡೆ ಮನೆ ಇದ್ದರೂ ಅದನ್ನು ಬಾಡಿಗೆಗೆ ನೀಡಿ ಇಲ್ಲೇ ವಾಸ ವಾಗಿದ್ದಾನೆ. ಆತ ಮನೆ ಬಿಟ್ಟುಕೊಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾವಿತ್ರಿ ಭಟ್ ಅವರ ಕೊನೆಯ ಮಗ ಕೃಷ್ಣ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News