ಇಂದಿನಿಂದ ಮಂಗಳೂರಿಗೆ 2 ದಿನಗಳಿಗೊಮ್ಮೆ ನೀರು: ಸಚಿವ ರೈ
ಮಂಗಳೂರು, ಎ.18: ನೇತ್ರಾವತಿ ನದಿ ನೀರಿನ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿದ್ದು, ತುಂಬೆ ಡ್ಯಾಂನಲ್ಲಿ ಇನ್ನು ಕೇವಲ 12 ದಿನಗಳಿಗೆ ಸಾಕಾಗುವಷ್ಟು ಮಾತ್ರ ನೀರಿನ ಸಂಗ್ರಹವಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ (ಎ.19ರಿಂದ) ಮಂಗಳೂರು ನಗರಕ್ಕೆ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ನಾಳೆಯಿಂದ ಕೈಗಾರಿಕೆ ಗಳಿಗೂ ಶೇ.50ರಷ್ಟು ನೀರು ಪೂರೈಕೆಯಲ್ಲಿ ಕಡಿತಗೊಳಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ. ಜಿಲ್ಲೆಯಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಇಂದು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಪ್ರಸಕ್ತ ತುಂಬೆ ಕಿಂಡಿ ಅಣೆಕಟ್ಟು ಹಾಗೂ ಶಂಭೂರಿನ ಎ.ಎಂ.ಆರ್. ಅಣೆಕಟ್ಟಿನ ನೀರು ಸೇರಿ ದರೂ ಒಟ್ಟು 12 ದಿನಗಳಿಗೆ ಮಾತ್ರ ಸಾಕಾದೀತು. ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈ ಗೊಳ್ಳಲು ತೀರ್ಮಾನಿಸಲಾಗಿದೆ. ಎರಡು ದಿನಗಳಿಗೊಮ್ಮೆ ಬಳಕೆ ಹಾಗೂ ಕೈಗಾರಿಕೆಗಳಿಗೆ ಪೂರೈಕೆಯಲ್ಲಿ ಕಡಿತ ಮಾಡುವುದರಿಂದ ಸಂಗ್ರಹವಿರುವ ನೀರು ಮುಂದಿನ 24 ದಿನಗಳಿಗೆ ಬಳಸಬಹುದು. ಇದರ ಜೊತೆಗೆ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ ಸಹಕರಿಸುವಂತೆ ಮನವಿ ಮಾಡಿದ ಸಚಿವರು, ಕೆಲವೆಡೆಗಳಲ್ಲಿರುವ ತೆರೆದಬಾವಿಗಳನ್ನು ಶುಚಿಗೊಳಿಸಿ ಬಳಕೆಗೆ ಯೋಗ್ಯವನ್ನಾಗಿ ಮಾಡಲಾ ಗುವುದು ಎಂದು ತಿಳಿಸಿದರು.
ಎ.21ರಂದು ಜಿಲ್ಲೆಗೆ ಮುಖ್ಯಮಂತ್ರಿ: ಎ.21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದ.ಕ. ಜಿಲ್ಲೆಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಬಜ್ಪೆ ವಿಮಾನ ನಿಲ್ದಾಣದ ಬಳಿ 11 ಕೋ.ರೂ. ಕಾಮಗಾರಿ ಸೇರಿದಂತೆ ಮಂಗಳೂರು ಪುರಭವನದಲ್ಲಿ ವಿವಿಧ ಪ್ರದೇಶಗಳ 41 ಕೋಟಿ ರೂ. ಮೊತ್ತ ಕಾಮಗಾರಿಗಳಿಗೆ ಸಾಂಕೇತಿಕವಾಗಿ ಅವರು ಚಾಲನೆ ನೀಡುವರು ಎಂದು ಸಚಿವ ರೈ ತಿಳಿಸಿದರು.
ಸಂತಾಪ: ಜುಬೈಲ್ ಅಗ್ನಿ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ ಸಚಿವ ರಮಾನಾಥ ರೈ, ಮೃತದೇಹಗಳನ್ನು ತವರಿಗೆ ತರಲು ಹಾಗೂ ಮೃತರ ಕುಟುಂಬಸ್ಥರಿಗೆ ಅಗತ್ಯ ಸಹಕಾರ ನೀಡಲು ಕೇಂದ್ರ ಸಚಿವರೊಂದಿಗೆ ಅಧಿಕಾರಿಗಳ ಮೂಲಕ ಸಂಪರ್ಕ ಮಾಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್, ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವ, ಮೇಯರ್ ಹರಿನಾಥ್, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ., ಪೊಲೀಸ್ ಕಮಿಷನರ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ನಿರ್ಮಾಣ ಕಾಮಗಾರಿಗಳಿಗೆ ಕುಡಿಯುವ ನೀರಿನ ಪೂರೈಕೆ ಸ್ಥಗಿತ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಯಾವುದೇ ರೀತಿಯಲ್ಲಿ ಕುಡಿಯುವ ನೀರನ್ನು ಬಳಕೆ ಮಾಡಬಾರದು. ಮಂಗಳವಾರ(ಎ.19)ದಿಂದಲೇ ಈ ರೀತಿಯ ಸಂಪರ್ಕಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
-ಹರಿನಾಥ್, ಮನಪಾ ಮೇಯರ್
ಕಳೆದ ವರ್ಷ ವಾಡಿಕೆಗಿಂತ ಶೇ.20ರಷ್ಟು ಕಡಿಮೆ ಮಳೆಯಾಗಿರುವುದು ಈ ಬಾರಿ ಇಷ್ಟು ಬೇಗ ನೀರಿನ ಸಮಸ್ಯೆ ತಲೆದೋರಲು ಪ್ರಮುಖ ಕಾರಣ. ಪ್ರಸ್ತುತ ತುಂಬೆಯಲ್ಲಿ 9 ಅಡಿ 6 ಇಂಚು ಮಾತ್ರ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 12 ಅಡಿ 7 ಇಂಚು ನೀರಿತ್ತು. ಅದೇರೀತಿ ಎ.ಎಂ.ಆರ್. ಅಣೆಕಟ್ಟಿನಲ್ಲಿ ಕಳೆದ ವರ್ಷ 17.8 ಮೀಟರ್ ನೀರಿನ ಸಂಗ್ರಹ ಇತ್ತು. ಈ ಬಾರಿ ಇದು 13.9 ಮೀಟರ್‌ಗೆ ಇಳಿಕೆಯಾಗಿದೆ.
-ರಮಾನಾಥ ರೈ, ಸಚಿವರು