ಹೆತ್ತವರಿಗೆ ಬೇಡದ, ನಿಮಗೆ ಬೇಕಾದ ಮಗು ಇಲ್ಲಿ ಒಂದು ಲಕ್ಷ ರೂ.ಗೆ ಲಭ್ಯ
ಭೋಪಾಲ್: ಪ್ರಮುಖ ಬೆಳವಣಿಗೆಯೊಂದರಲ್ಲಿ ಮಧ್ಯ ಪ್ರದೇಶ ಪೊಲೀಸರು ಗ್ವಾಲಿಯರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯಾಚರಿಸುತ್ತಿತ್ತೆನ್ನಲಾದ ‘ಬೇಬಿ ಫಾರ್ಮ್’ ಒಂದನ್ನುಪತ್ತೆ ಹಚ್ಚಿದ್ದು ಇಲ್ಲಿ‘ಬೇಡವಾದ’ ನವಜಾತ ಶಿಶುಗಳನ್ನು ಖರೀದಿಸಲು ಯಾ ಅವುಗಳನ್ನು ಅದಲು ಬದಲು ಮಾಡಲು ರೂ. ಒಂದು ಲಕ್ಷ ನೀಡಬೇಕಿತ್ತೆಂದು ತಿಳಿದು ಬಂದಿದೆ. ಖಚಿತ ಮಾಹಿತಿಯ ಮೇರೆಗೆ ಈ ಆಸ್ಪತ್ರೆಯ ಮೇಲೆ ಕಳೆದ ವಾರಾಂತ್ಯದಲ್ಲಿ ದಾಳಿ ನಡೆಸಲಾಗಿತ್ತು.
ಅತ್ಯಾಚಾರ ಯಾ ಅಕ್ರಮ ಸಂಬಂಧದಿಂದ ಹುಟ್ಟಿದ ಶಿಶುಗಳನ್ನು ಈ ಆಸ್ಪತ್ರೆಯಲ್ಲಿ ಹೆರಲಾಗುತ್ತದೆ ಹಾಗೂ ದತ್ತು ನೀಡುವ ಸಲುವಾಗಿ ಮಾರಾಟ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ವಾಲಿಯರ್ ನಗರದ ಮುರಾರ್ ಪ್ರದೇಶದಲ್ಲರುವ 20 ಹಾಸಿಗೆಯಪಲಾಶ್ ಆಸ್ಪತ್ರೆಯಿಂದ ಎರಡು ನವಜಾತ ಶಿಶುಗಳನ್ನು ರಕ್ಷಿಸಲಾಗಿದ್ದರೆ ಇನ್ನೂ ಮೂರು ಶಿಶುಗಳನ್ನು ಮಕ್ಕಳಿಲ್ಲದ ದಂಪತಿಗಳಿಗೆ ಉತ್ತರಪ್ರದೇಶ ಹಾಗೂ ಛತ್ತೀಸಗಢದಲ್ಲಿ ಮಾರಾಟ ಮಾಡಲಾಗಿದೆ,ಎಂದು ಕ್ರೈಂ ಬ್ರ್ಯಾಂಚ್ ಎಎಸ್ಪಿ ತಿಳಿಸಿದ್ದಾರೆ.
ಆಸ್ಪತ್ರೆಯ ನಿರ್ದೇಶಕ ಟಿ.ಕೆ.ಗುಪ್ತಾ,ಮ್ಯಾನೇಜರ್ ಅರುಣ್ ಭಡೋರಿಯ, ಆಸ್ಪತ್ರೆಯಿಂದ ಮಕ್ಕಳನ್ನು ಖರೀದಿಸಿದವರು ಸೇರಿದಂತೆ ಐದು ಮಂದಿಯ ವಿರುದ್ಧ ಸೆಕ್ಷನ್ 370, 371 ಹಾಗೂ 373 ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಗೆಚಂಬಲ್ ಪ್ರದೇಶದಲ್ಲಿ ಏಜಂಟರಿದ್ದು ಅವರು ಬೇಡವಾದ ಗರ್ಭ ಧರಿಸಿರುವ ಯುವತಿಯರನ್ನು ಪತ್ತೆ ಹಚ್ಚಿ ಈ ಆಸ್ಪತ್ರೆಗೆ ಕರೆತರುತ್ತಿದ್ದರೆನ್ನಲಾಗಿದೆ.
ಈ ಆಸ್ಪತ್ರೆಯಿಂದ ಶಿಶುಗಳನ್ನು ಖರೀದಿಸಿದ ದಂಪತಿಗಳನ್ನು ಹುಡುಕಲು ಪೊಲೀಸ್ ತಂಡಗಳನ್ನು ಛತ್ತೀಸ್‌ಗಢ ಹಾಗೂ ಉತ್ತರ ಪ್ರದೇಶಕ್ಕೆ ಕಳುಹಿಸಲಾಗಿದೆ.