×
Ad

ಎ. 21ರಿಂದ ಬಂಟ್ವಾಳ ತಾಲೂಕಿಗೆ ಸಿಎಂ ಸಹಿತ ವಿಪಕ್ಷ ನಾಯಕರ ದಂಡು, ತಾಲೂಕಿನಾದ್ಯಂತ ಹೆಚ್ಚಿದ ಪೊಲೀಸ್ ಭದ್ರತೆ

Update: 2016-04-19 16:43 IST

ಬಂಟ್ವಾಳ, ಎ. 19: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಕೇಂದ್ರ ಹಾಗೂ ರಾಜ್ಯ ಸಚಿವರ ದಂಡು ಎಪ್ರಿಲ್ 21ರಿಂದ 23ರವರೆಗೆ ಸಜಿಪ ಮತ್ತು ಕಲ್ಲಡ್ಕಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಮುಂಜಾಗೃತ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಎಪ್ರಿಲ್ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಜಿಪಮೂಡದಲ್ಲಿ ನಿರ್ಮಾಣಗೊಂಡಿರುವ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜ್ಞಾನ ಮಂದಿರದ ಲೋಕಾರ್ಪಣೆಗಾಗಿ ಆಗಮಿಸಲಿದ್ದಾರೆ. ಅದೇ ದಿನ ರಾಜ್ಯದ ಕೆಲವು ಸಚಿವರ ಗಡಣ ಕೂಡಾ ಜೊತೆಯಲ್ಲಿರಲಿದೆ. ಈಗಾಗಲೇ ತಾಲೂಕು ಆಡಳಿತ ಮುಖ್ಯಮಂತ್ರಿಯವರ ಆಗಮನದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದೆ. ಸ್ಥಳದಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೂಡಾ ನಿಯೋಜಿಸಲಾಗಿದೆ. ಅದೇ ರೀತಿ ಕಲ್ಲಡ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರದ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ದೊರೆತಿದ್ದು, 23ರ ವರೆಗೆ ವಿವಿಧ ಕಾರ್ಯಕ್ರಮಗಳು ಜರಗಲಿದೆ.

ಈ ಸಂದರ್ಭದಲ್ಲಿ ನಡೆಯಲಿರುವ ಧಾರ್ಮಿಕ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನಸಭಾ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೇರಿದಂತೆ ಹಲವಾರು ಗಣ್ಯರು, ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಕಲ್ಲಡ್ಕ ಹಾಗೂ ಸಜಿಪ ತಾಲೂಕಿನಲ್ಲೇ ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಮುಂಜಾಗೃತೆಯನ್ನು ವಹಿಸಿಕೊಂಡಿದ್ದು, ಈ ದಿಸೆಯಲ್ಲಿ ವ್ಯಾಪಕ ಬಂದೋಬಸ್ತ್‌ಗಾಗಿ ಹೆಚ್ಚುವರಿ ಪೊಲೀಸರನ್ನು ತಾಲೂಕಿಗೆ ಕರೆಸಲಾಗಿದೆ. ಈಗಾಗಲೇ ನಿಯೋಜಿಸ್ಪಟ್ಟ ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ಗಸ್ತು ತಿರುಗಲು ಆರಂಭಿಸಿದ್ದಾರೆ. ಕೆಲವು ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಗಳನ್ನು ಅಳವಡಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಈ ಸಂಬಂಧವಾಗಿ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News