×
Ad

ಪುತ್ತೂರು: ಪಡಿತರ ಅನ್ನಭಾಗ್ಯದ ಅಕ್ಕಿಯಲ್ಲಿ ಹುಳಗಳ ರಾಶಿ - ಗ್ರಾಹಕರಿಂದ ದೂರು

Update: 2016-04-19 18:13 IST

 ಪುತ್ತೂರು: ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ನ್ಯಾಯಬೆಲೆ ಅಂಗಡಿಗೆ ಕಳಪೆ ಮಟ್ಟದ ಅಕ್ಕಿ ಪೂರೈಕೆ ಮಾಡಲಾಗಿದ್ದು, ಅಕ್ಕಿ ತುಂಬಿದ ಗೋಣಿಯನ್ನು ಬಿಚ್ಚಿದರೆ ರಾಶಿ ರಾಶಿ ಹುಳದ ಗೂಡುಗಳು, ಕಸ, ಧೂಳು ತುಂಬಿಕೊಂಡಿರುವ ಬಗ್ಗೆ ಸ್ಥಳೀಯರು ಆಹಾರ ಇಲಾಖೆಗೆ ದೂರು ನೀಡಿದ್ದಾರೆ. ಕೆಯ್ಯೂರು ನ್ಯಾಯಬೆಲೆ ಅಂಗಡಿ ಸಂಖ್ಯೆ-18, ಇದು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಡಿಯಲ್ಲಿ ನಡೆಯುತ್ತಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ 115 ಕ್ವಿಂಟಾಲ್ ಕುಚ್ಚಲು ಅಕ್ಕಿ ಈ ನ್ಯಾಯಬೆಲೆ ಅಂಗಡಿಗೆ ಬಂದಿದೆ. ಎ.11 ರಿಂದ ಆಹಾರ ಸಾಮಾಗ್ರಿಗಳ ವಿತರಣೆ ಮಾಡಲಾಗಿದೆ. ಪ್ರಸ್ತುತ ದಾಸ್ತಾನು ಇರುವ ಬಹುತೇಕ ಎಲ್ಲಾ ಅಕ್ಕಿ ಮೂಟೆಗಳಲ್ಲಿ ಹುಳವಾಗಿದೆ. ಕೂಡಿವೆ. ಗೋಣಿಯ ಮೇಲ್ಬಾಗದಲ್ಲಿ ಹುಳ ಗೂಡು ಕಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಗೋಣಿಯೊಳಗಿಂದ ಧೂಳು ಚಿಮ್ಮುತ್ತಿದೆ. ಅತ್ಯಂತ ಹಳೇಯ ದಾಸ್ತಾನು ಇದಾಗಿರಬೇಕು ಎಂಬುದು ಸ್ಥಳೀಯರ ಆರೋಪವಾಗಿದೆ. ಬೆಳ್ತಿಗೆ ಅಕ್ಕಿ ಒಳ್ಳೆದಿರುತ್ತದೆ. ಆದರೆ ಕುಚ್ಚಲಕ್ಕಿ ಮಾತ್ರ ಹುಳ, ಗುಗ್ಗುರುಗಳಿಂದ ತುಂಬಿರುತ್ತದೆ ಎಂದು ಗ್ರಾಹಕರು ದೂರಿದ್ದಾರೆ.

ಸರಕಾರದ ಅನ್ನಭಾಗ್ಯ ಯೋಜನೆ ಜನರ ಪಾಲಿಗೆ ಸಾವಿನ ಭಾಗ್ಯ ಆಗುವ ಭಯ ಕಾಡುತ್ತಿದೆ ಎಂದು ಆರೋಪಿಸಿರುವ ಸ್ಥಳೀಯರಾದ ಪುತ್ತೂರು ತಾಲೂಕು ಬಿ.ಎಸ್.ಪಿ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಎರಕ್ಕಳ ಅವರು ಇದಕ್ಕೆ ಸರಕಾರ ಮತ್ತು ಆಹಾರ ಇಲಾಖಾ ಅಧಿಕಾರಿಗಳು ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ತಿಂಗಳ ಅಕ್ಕಿ ಸಂಪೂರ್ಣ ಹಾಳಾಗಿದ್ದು, ಕಸ ಧೂಳು, ತುಂಬಿಕೊಂಡಿದೆ. ಇದನ್ನು ಬೇಯಿಸಿದಾಗ ಬೆಂದ ಅನ್ನವು ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಈ ಅನ್ನವನ್ನು ಸೇವಿಸಿದರೆ ಆರೋಗ್ಯ ಹಾಳಾಗಿ ಸಾವು ಖಚಿತ ಎಂದು ದೂರಿನಲ್ಲಿ ಆರೋಪಿಸಿರುವ ಅವರು ಇದಕ್ಕೆ ನ್ಯಾಯಬೆಲೆ ಅಂಗಡಿದಾರರು ಹೊಣೆಯಲ್ಲ, ಈ ಬಗ್ಗೆ ಆಹಾರ ಇಲಾಖಾ ಅಧಿಕಾರಿಗಳು ಹೊಣೆಯಾಗಿದ್ದಾರೆ. ಅಕ್ಕಿ ಸರಬರಾಜು ಮಾಡುವ ಮೊದಲು ಎಲ್ಲಾ ಅಕ್ಕಿ ಮೂಟೆಗಳನ್ನು ಪರಿಶೀಲನೆ ಮಾಡಿಯೇ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.

...........................................................

ಕೆಯ್ಯೂರು ನ್ಯಾಯಬೆಲೆ ಅಂಗಡಿಗೆ ಕಳಪೆ ಮಟ್ಟದ ಅಕ್ಕಿ ಪೂರೈಕೆ ಮಾಡಿರುವುದು ಗಮನಕ್ಕೆ ಬಂದಿದ್ದು, ಪರಿಶೀಲನೆ ಮಾಡಿದ್ದೇನೆ. ಆಹಾರ ಪೂರೈಕಾ ಅಧಿಕಾರಿಗಳಿಗೆ ಅಂಗಡಿಯ ಶಾಖಾಧಿಕಾರಿ ವಿಷಯ ತಿಳಿಸಿದ್ದಾರೆ. ಆಹಾರ ಸಾಮಾಗ್ರಿ ಹಿಂದಕ್ಕೆ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರಂತೆ. ಇನ್ನು ಮುಂದಕ್ಕೆ ಕಳಪೆ ಮಟ್ಟದ ಆಹಾರ ಸಾಮಾಗ್ರಿ ಪೂರೈಕೆ ಮಾಡದಂತೆ ಎಚ್ಚರ ವಹಿಸಬೇಕು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ್‌ಗೆ ಬರೆದುಕೊಳ್ಳುತ್ತೇವೆ.

ಕಳಪೆ ಆಹಾರ ಸಾಮಾಗ್ರಿ ಪೂರೈಕೆ ಮಾಡಿರುವ ಬಗ್ಗೆ ತಹಶೀಲ್ದಾರ್‌ಗೆ ಬರೆಯಲಾಗುವುದು
-ಕೆ.ಎಂ ಸುಬ್ರಹ್ಮಣ್ಯ, ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ

ಅಕ್ಕಿ ಮೂಟೆ ಬಂದಾಗಲೇ ಅದನ್ನು ನೋಡಿ ಅಕ್ಕಿ ಹಾಳಾಗಿರುವ ವಿಷಯವನ್ನು ಕೆ.ಎಫ್.ಸಿ( ಕರ್ನಾಟಕ ಆಹಾರ ನಿಗಮ) ಪುತ್ತೂರು ಅಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದೇವೆ. ಅದಕ್ಕೆ ಅವರು ಒಳ್ಳೆಯದನ್ನು ಗ್ರಾಹಕರಿಗೆ ಕೊಡಿ, ಹಾಳಾದ್ದನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಅಕ್ಕಿ ಸಂಪೂರ್ಣ ಹಾಳಾಗಿರುವ ಬಗ್ಗೆ ಗ್ರಾ.ಪಂ, ತಾ.ಪಂ ಆಹಾರ ಇಲಾಖಾ ಅಕಾರಿಗಳು ಇವರೆಲ್ಲರ ಎಲ್ಲರ ಗಮನಕ್ಕೂ ತಂದಿದ್ದೇವೆ. ಇದೀಗ ಗ್ರಾಹಕರ ಆಯ್ಕೆಗೆ ಬಿಟ್ಟಿದ್ದೇವೆ. ಒಳ್ಳೆಯ ಅಕ್ಕಿ ನೋಡಿ ಪಡೆದುಕೊಳ್ಳಿ ಎಂದು ಹೇಳುತ್ತಿದ್ದೇವೆ.

- ಸದಾಶಿವ ಭಟ್, ಶಾಖಾಧಿಕಾರಿ ನ್ಯಾಯಬೆಲೆ ಅಂಗಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News