ಮೂಡುಬಿದರೆ: ಕಾಮನೆಗಳನ್ನು ಮೆಟ್ಟಿ ವಿವೇಕವನ್ನು ಜಾಗೃತಗೊಳಿಸಿದವರು ಭಗವಾನ್ ಮಹಾವೀರರು
ಮೂಡುಬಿದರೆ: ಜನರನನ್ನು ಜಿನರನ್ನಾಗಿಸುವ ಪವಿತ್ರ ಧರ್ಮವೇ ಜೈನಧರ್ಮ. ಕೌರ್ಯಗಳನ್ನು ಖಂಡಿಸಿ, ಮನಸ್ಸನ್ನು ಸುಸಂಸ್ಕೃತ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು ಎನ್ನುವ ತತ್ವದ ಜತೆಗೆ ಕಾಮನೆಗಳನ್ನು ಮೆಟ್ಟಿನಿಂತು, ಮನಸ್ಸನ್ನು ಹಿಡಿತದಲ್ಲಿಟ್ಟು ವಿವೇಕವನ್ನು ಜಾಗೃತವಾಗಿರಿಸಿಕೊಳ್ಳಬೇಕೆಂದು ಸಾರಿದವರು ಭಗವಾನ್ ಮಹಾವೀರರು ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಜೈನ ಎನ್ನುವುದು ಜಾತಿಯಿಂದಲ್ಲ ಅದು ನೀತಿಯಿಂದಾಗುತ್ತದೆ. ಜಾತಿಜೈನರಿಗಿಂತ ನೀತಿಜೈನರಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಹೇಳಿದರು.
ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ ರಾಜೇಂದ್ರ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಅಂತರಂಗದಲ್ಲಿ ಶ್ರೇಷ್ಠ ಚಿಂತನೆಗಳಿದ್ದರೆ ನಾವು ಸಮಾಜಮುಖಿಯಾಲು ಸಾಧ್ಯ. ಅಹಿಂಸೆಯ ತತ್ವವನ್ನು ಪ್ರಚುರಪಡಿಸಿ ಈ ಮೂಲಕ ಸಮಾಜಮುಖಿ ಚಿಂತನೆಗೆ ಹೆಚ್ಚು ಆಧ್ಯತೆ ನೀಡಿದವರು ಶ್ರೀ ಮಹಾವೀರ ಸ್ವಾಮೀಜಿ. ಜೈನ ಧರ್ಮದ ತತ್ವಗಳು ಅದರಲ್ಲೂ ಶ್ರೀಮಹಾವೀರರ ಜೀವಾನಾದರ್ಶಗಳು ನಮ್ಮ ಬದುಕನ್ನು ಬೆಳಗಿಸುವಂತದ್ದು. ಬುದ್ಧಿವಂತರಾಗುವುದು ಮುಖ್ಯವಲ್ಲ ಹೃದಯವಂತರಾಗುವುದು ಶ್ರೇಷ್ಠ. ಮನುಷ್ಯತ್ವವವು ನಮ್ಮ ಬದುಕಿನಲ್ಲಿದ್ದರೆ ನಾವು ಸಂತೋಷವಾಗಿರಬಹುದು. ಇತರರನ್ನು ಸಂತೋಷವಾಗಿ ಬದುಕಲು ಬಿಡಬಹುದು ಎಂದರು.
ಉಜಿರೆ ಎಸ್‌ಡಿಎಂ ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಮುಖ್ಯ ಅತಿಥಿಯಾಗಿ ಮಾತನಾಡಿ, ರತ್ನತ್ರಯಗಳನ್ನು ಬದುಕಿನಲ್ಲಿ ಅಳವಡಿಸಿದರೆ ಶಾಶ್ವತ ಸಂತೋಷ ದೊರೆಯುತ್ತದೆ. ಧರ್ಮದ ತತ್ವಗಳನ್ನು ವಿಂಗಡಿಸುವ ಬದಲು, ಒಗ್ಗೂಡಿಸುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ಧರ್ಮವು ಸಾರ್ವತ್ರಿಕವಾಗಿದ್ದು, ಅದರಲ್ಲಿರುವ ಉತ್ತಮ ಅಂಶವು ನಮ್ಮ ಮನಸ್ಸಿನ ಭಾವನೆಗಳನ್ನು ಜಾಗೃತಗೊಳಿಸುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ ವಿಶ್ವಕ್ಕೆ ಅಹಿಂಸೆಯ ಮಹತ್ವ ಸಾರಿದ ಮಹಾವೀರರ ಜಯಂತಿಯನ್ನು ಆಳ್ವಾಸ್ ಕ್ಯಾಂಪಸ್ಸಿನಲ್ಲಿ ಪ್ರಸಕ್ತ ವರ್ಷದಿಂದ ಆಚರಿಸುತ್ತೇವೆ. ಮಹಾವೀರ ಜಯಂತಿಯನ್ನು ವೈಭವೀಕರಣವಿಲ್ಲದೆ ಜೈನಧರ್ಮದ ಮೂಲತತ್ವಗಳಿಗೆ ಮಹತ್ವ ನೀಡಿ ಆಚರಿಸುವ ನಿರ್ಧಾರ ಕೈಕೊಂಡಿದ್ದೇವೆ. ಸ್ವಾಮೀಜಿಯವರ ಸಲಹೆಯಂತೆ ಮಹಾವೀರ ಜಯಂತಿ ಸಂದರ್ಭ ಕ್ಯಾಂಪಸ್ಸ್ ಹಾಗೂ ಹಾಸ್ಟೆಲ್‌ಗಳಲ್ಲಿ ಶುದ್ಧ ಸಸ್ಯಹಾರವನ್ನು ಸೇವನೆಯನ್ನು ಮಾಡುತ್ತೇವೆ.ಆಳ್ವಾಸ್ ಕ್ಯಾಂಪಸ್ಸ್‌ನಲ್ಲಿ ಶ್ರೀಮಹಾವೀರರ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು. ಎಲ್ಲ ಧರ್ಮದವರಿಗೆ ಸಮಾನ ಪ್ರಾಧನ್ಯತೆ ನೀಡಿ ಅವರವರ ಆಚರಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಚೌಟರ ಅರಮನೆಯ ಕುಲದೀಪ್ ಎಂ ಮುಖ್ಯ ಅತಿಥಿಯಾಗಿದ್ದರು. ನಿವೃತ್ತ ಶಿಕ್ಷಕ ಅಂಡಾರು ಗುಣಪಾಲ ಹೆಗ್ಡೆ ಸ್ವಾಗಿತಿಸಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.
ಆಳ್ವಾಸ್‌ನಲ್ಲಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಜೈನ ಸ್ವಾಮೀಜಿ ಆಶೀರ್ವಚನ ನೀಡಿದರು.