ಬಂಟ್ವಾಳ: ಗ್ಯಾಸ್ ಟ್ಯಾಂಕರ್‌ಗಳನ್ನು ತಡೆದು ಪ್ರತಿಭಟನೆ
ಬಂಟ್ವಾಳ, ಎ. 19: ಸುರಿಕುಮೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ 6 ಗಂಟೆಯ ಬಳಿಕ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್‌ಗಳನ್ನು ಸ್ಥಳೀಯ ನಾಗರಿಕರು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ಸೂರಿಕುಮೇರು ರಾಷ್ಟ್ರೀಯ ಹೆದ್ದಾರಿ 75ರ ತಿರುವಿನಲ್ಲಿ ಸೋಮವಾರ ರಾತ್ರಿ ಗ್ಯಾಸ್ ತುಂಬಿದ ಟ್ಯಾಂಕರೊಂದು ಪಲ್ಟಿಯಾದ ಪರಿಣಾಮ ಭಾರೀ ಪ್ರಮಾಣದ ಅನಿಲ ಸೋರಿಕೆಯಿಂದ ಆತಂಕಿತರಾಗಿ ರಾತ್ರಿ ಕಳೆದ ಇಲ್ಲಿನ ಜನತೆ, ಇಂದು ಸಂಜೆ 6 ಗಂಟೆಯ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ 25ಕ್ಕೂ ಹೆಚ್ಚು ಟ್ಯಾಂಕರ್‌ಗಳನ್ನು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿಯುತ್ತಿದ್ದಂತೆ ಬಂಟ್ವಾಳ ನಗರ ಠಾಣೆ ಎಸ್ಸೈ ನಂದಕುಮಾರ್ ಹಾಗೂ ಅವರ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನಕಾರರ ಮನವೋಲಿಸಲು ಪ್ರಯತ್ನಿಸಿದರು. ಆದರೆ ಪಟ್ಟು ಬಿಡದ ಪ್ರತಿಭಟನಕಾರರು, ಸಂಜೆ 6 ಗಂಟೆಯ ಬಳಿಕ ಗ್ಯಾಸ್ ಟ್ಯಾಂಕರ್ ಸಂಚಾರ ಬಾರದೆಂಬ ನಿಯಮವಿದ್ದರೂ ಸಂಜೆ ಬಳಿಕವೇ ಅಧಿಕ ಪ್ರಮಾಣದಲ್ಲಿ ಟ್ಯಾಂಕರ್‌ಗಳು ಸಂಚರಿಸುತ್ತಿದೆ. ಇದನ್ನು ನೋಡಿ ಅಧಿಕಾರಿಗಳು ಮೌನವಾಗಿರುತ್ತಾರೆ. ಬಲಿಯಾಗುತ್ತಿರುವುದು ಮಾತ್ರ ಅಮಾಯಕ ಜೀವಗಳು. ಯಾವುದೇ ಕಾರಣಕ್ಕೂ ಸಂಜೆ 6 ಗಂಟೆ ಬಳಿಕ ಟ್ಯಾಂಕರ್‌ಗಳ ಸಂಚಾರಕ್ಕೆ ಬಿಡುವುದಿಲ್ಲ ಎಂದು ಪೊಲೀಸರೊಂದಿಗೆ ಮಾತಿಗಿಳಿದರು. ಈ ವೇಳೆ ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು.
ನಾಳೆಯಿಂದ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೆ ಬಳಿಕ ಟ್ಯಾಂಕರ್‌ಗಳು ಸಂಚಾರಿಸದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಸೈ ನಂದಕುಮಾರ್ ಪ್ರತಿಭಟನಕಾರರಿಗೆ ಭರವಸೆ ನೀಡಿದ ಬಳಿಕ ತಡೆದು ನಿಲ್ಲಿಸಿದ್ದ ಟ್ಯಾಂಕರ್‌ಗಳ ಸಂಚಾರಕ್ಕೆ ಪ್ರತಿಭಟನಕಾರರು ಅನುವು ಮಾಡಿಕೊಟ್ಟರು. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಳೆಯಿಂದ ಸಂಜೆ 6 ಗಂಟೆ ಬಳಿಕ ಟ್ಯಾಂಕರ್‌ಗಳು ಸಂಚರಿಸಿದರೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರತಿಭಟನಕಾರರು ಎಚ್ಚಿರಿಕೆ ನೀಡಿದರು.