×
Ad

ಮಂಗಳೂರು : ರಾಜೇಶ್ ಕೊಲೆ ಪ್ರಕರಣ, ಇನ್ನೋರ್ವ ಆರೋಪಿಯ ಸೆರೆ

Update: 2016-04-19 21:49 IST

ಮಂಗಳೂರು, ಎ. 19: ಉಳ್ಳಾಲ ಮೊಗವೀರಪಟ್ನದಲ್ಲಿ ನಡೆದ ರಾಜೇಶ್ ಕೊಟ್ಯಾನ್ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಳ್ಳಾಲ ಕೆಳಗೆಬೀಡು ನಿವಾಸಿ ಅಬ್ದುಲ್ ರನ್ನೀಸ್ ಯಾನೆ ರನ್ನಿ (18) ಎಂದು ಗುರುತಿಸಲಾಗಿದೆ.
ಎಪ್ರಿಲ್ 12ರಂದು ಬೆಳಗ್ಗಿನ ಜಾವ ಸುಮಾರು 2-40ಕ್ಕೆ ಉಳ್ಳಾಲ ಮೊಗವೀರಪಟ್ನ ನಿವಾಸಿ ರಾಜೇಶ್ ಕೊಟ್ಯಾನ್ ಯಾನೆ ರಾಜ ಎಂಬವರು ಎಂದಿನಂತೆ ಉಳ್ಳಾಲ ಮೊಗವೀರಪಟ್ನ ತನ್ನ ವಾಸದ ಮನೆಯಿಂದ ಉಳ್ಳಾಲ ಕೋಟೆಪುರ ಜೆಟ್ಟಿ ಕಡೆಗೆ ಮೀನುಗಾರಿಕೆ ಕೆಲಸಕ್ಕೆ ಹೋದವರನ್ನು ದುಷ್ಕರ್ಮಿಗಳು ಉಳ್ಳಾಲ ಕೋಟೆಪುರ ಬರಕಾ ಓವರ್‌ಸೀಸ್ ಫ್ಯಾಕ್ಟರಿಯ ಬಳಿ ಕೊಲೆ ಮಾಡಿದ್ದಾರೆ ಎಂದು ಮೃತರ ತಮ್ಮ ಜಗದೀಶ ಕೊಟ್ಯಾನ್ ಪೊಲೀಸರಿಗೆ ದೂರು ನೀಡಿದ್ದರು.
ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ಮುಹಮ್ಮದ್ ಅಸ್ವೀರ್ ಯಾನೆ ಅಚ್ಚು, ಅಬ್ದುಲ್ ಮುತಾಲಿಬ್ ಯಾನೆ ಮುತ್ತು, ಬಾಸಿತ್ ಆಲಿ ಯಾನೆ ಬಾಚಿ ಎಂಬವರನ್ನು ಎಪ್ರಿಲ್ 14ರಂದು ಮಂಗಳೂರು ಸಿಸಿಬಿ ಪೊಲೀಸರು ಉಳ್ಳಾಲ ಸೋಮೇಶ್ವರ ರೈಲ್ವೆ ನಿಲ್ದಾಣದ ಬಳಿಯಲ್ಲಿ ದಸ್ತಗಿರಿ ಮಾಡಿದ್ದರು. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ 3 ಮಂದಿ ಆರೋಪಿಗಳ ಪೈಕಿ ಅಬ್ದುಲ್ ರನ್ನೀಸ್ ರನ್ನಿ ಎಂಬಾತನ್ನು ಫರಂಗಿಪೇಟೆ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News