×
Ad

ಇಷ್ರತ್ ಪ್ರಕರಣ:ಸೋನಿಯಾ ವಿರುದ್ಧ ಬಿಜೆಪಿ ತೀವ್ರ ದಾಳಿ

Update: 2016-04-19 22:25 IST

ಹೊಸದಿಲ್ಲಿ,ಎ.19: ಇಷ್ರತ್ ಜಹಾನ್ ವಿಷಯದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಮಂಗಳವಾರ ಹೊಸದಾಗಿ ದಾಳಿ ನಡೆಸಿರುವ ಬಿಜೆಪಿಯು,ಯುಪಿಎ ಸರಕಾರವು ಭಯೋತ್ಪಾದಕರನ್ನು ಸಹಿಸುತ್ತದೆ, ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾಗುವುದನ್ನು ಸಹಿಸುವುದಿಲ್ಲವಾದ್ದರಿಂದ ಪ್ರಕರಣದಲ್ಲಿ ಎರಡನೇ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಅವರು ಆಗಿನ ಗೃಹಸಚಿವ ಪಿ.ಚಿದಂಬರಂ ಅವರಿಗೆ ಸೂಚಿಸಿದ್ದರು ಎಂದು ಹೇಳಿದೆ.

ಇಷ್ರತ್ ಲಷ್ಕರ್ ಉಗ್ರಳಾಗಿದ್ದಳು ಮತ್ತು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಬೆದರಿಕೆಯಾಗಿದ್ದಳು ಎಂದು ಉಲ್ಲೇಖಿಸಲಾಗಿದ್ದ ಪ್ರಮಾಣಪತ್ರವನ್ನು ಬದಲಿಸುವಂತೆ ಸೂಚಿಸಿದ್ದ ‘ತಪ್ಪಿತಸ್ಥ’ರನ್ನು ಹೆಸರಿಸುವಂತೆ ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಅವರು ಚಿದಂಬರಂ ಅವರನ್ನು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷದ ಆದೇಶಗಳೆಲ್ಲವೂ ಒಬ್ಬರೇ ವ್ಯಕ್ತಿಯಿಂದ ಬರುತ್ತವೆ ಎನ್ನುವುದು ನಮಗೆಲ್ಲ ಗೊತ್ತು. ಅವರು ಯಾರು ಎನ್ನುವುದು ನಿಮಗೆ(ಚಿದಂಬರಂ) ಗೊತ್ತು. ರಿಮೋಟ್ ಕಂಟ್ರೋಲ್ ಇರುವುದು ಅವರ ಬಳಿಯಲ್ಲಿಯೇ ಎಂದು ಪಾತ್ರಾ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋನಿಯಾರನ್ನು ಸ್ಪಷ್ಟವಾಗಿ ಪ್ರಸ್ತಾಪಿಸಿ ಹೇಳಿದರು.

ಇಷ್ರತ ಲಷ್ಕರ್ ಉಗ್ರಳಾಗಿದ್ದಳು ಮತ್ತು ಮೋದಿಯವರಿಗೆ ಬೆದರಿಕೆಯಾಗಿದ್ದಳು ಎಂದು ಎನ್‌ಐಎ ಮತ್ತು ಎಫ್‌ಬಿಐ ಒದಗಿಸಿದ್ದ ಮಾಹಿತಿಗಳನ್ನು ಸೋನಿಯಾ,ಆಗಿನ ಪ್ರಧಾನಿ ಮನಮೋಹನ ಸಿಂಗ್ ಮತ್ತು ಚಿದಂಬರಂ ಮುಚ್ಚಿಟ್ಟಿದ್ದರು ಎಂದು ಆರೋಪಿಸಿದರು.

ಯುಪಿಎ ಸರಕಾರದ ಕ್ರಮವು ಪ್ರಜಾಪ್ರಭುತ್ವದ ಬೇರಿಗೇ ಪೆಟ್ಟು ನೀಡಿದೆ ಎಂದು ಆರೋಪಿಸಿದ ಪಾತ್ರಾ,ಇಷ್ರತ್ ಮೋದಿಯವರನ್ನು ಕೊಲ್ಲಲೆಂದೇ ಲಷ್ಕರ್ ಸಿದ್ಧಗೊಳಿಸಿದ್ದ ಆತ್ಮಹತ್ಯಾ ಬಾಂಬರ್ ಆಗಿದ್ದಳು ಎನ್ನುವುದು ಅದಕ್ಕೆ ಗೊತ್ತಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News