×
Ad

ಮಾನವ ಅಂಗಾಂಗ ದಾನಕ್ಕೆ ಮತ್ತೆ ಸಾಕ್ಷಿಯಾದ ಮಂಗಳೂರು

Update: 2016-04-20 12:36 IST

ಮಂಗಳೂರು, ಎ.20: ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನೊಬ್ಬನ ಅಂಗಾಂಗಳನ್ನು ದಾನ ಮಾಡಲು ಆತನ ಕುಟುಂಬಸ್ಥರು ಮುಂದಾಗಿ ಮಾನವೀಯತೆ ಮೆರೆದ ಘಟನೆ ಮಂಗಳೂರಿನಲ್ಲಿಂದು ನಡೆದಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆಯ ಮುಲ್ಲೂರು ಗ್ರಾಮ ನಿವಾಸಿ 20ರ ಹರೆಯದ ವಿಜಯಕಾಂತ್ ಅಂಗಾಂಗ ದಾನಕ್ಕೊಳಗಾದವರು. ಅಪಘಾತದಿಂದ ತಲೆಗೆ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅವರ ಅಂಗಾಂಗಗಳನ್ನು ನಗರದ ಎ.ಜೆ. ಆಸ್ಪತ್ರೆಯಲ್ಲಿ ದಾನ ಮಾಡಲಾಯಿತು. ಕಲ್ಲಿನ ಕೋರೆಯಲ್ಲಿ ಕಾರ್ಮಿಕರಾಗಿದ್ದ ವಿಜಯಕಾಂತ್ ಎ.14ರಂದು ಸಂಜೆ 6 ಗಂಟೆ ಸುಮಾರಿಗೆ ಇಲ್ಲಿನ ಸಿದ್ಧಾಪುರದಲ್ಲಿ ಅಪಘಾತಕ್ಕೊಳಗಾಗಿದ್ದರು. ಇದರಿಂದ ತಲೆಗೆ ಗಂಭೀರ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಎ.16ರಂದು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರ ಮೆದುಳು ಎ.19ರಂದು (ಸೋಮವಾರ) ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದರು. ಈ ಹಿನ್ನೆಲೆಯಲ್ಲಿ ಎ.ಜೆ. ಆಸ್ಪತ್ರೆಯ ವೈದ್ಯರು ಕೂಡಲೇ ವಿಜಯಕಾಂತ್‌ರ ಕುಟುಂಬಸ್ಥರಿಗೆ ಅಂಗಾಂಗ ದಾನದ ಮಹತ್ವವನ್ನು ಮನವರಿಕೆ ಮಾಡಿದರು. ಬಳಿಕ ವಿಜಯಕಾಂತ್‌ರ ಸಹೋದರ ರಮೇಶ್ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು.
ಅದರಂತೆ ವಿಜಯಕಾಂತ್‌ರ ಎರಡು ಕಿಡ್ನಿ ಮತ್ತು ಲಿವರ್‌ನ್ನು ದಾನ ಮಾಡಲಾಯಿತು. ಲಿವರ್‌ನ್ನು ಇಂದು ಬೆಳಗ್ಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಸಾಗಿಸಿ ಒಬ್ಬರಿಗೆ ಜೋಡಿಸಲಾಯಿತು. ಒಂದು ಕಿಡ್ನಿಯನ್ನು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ಸಾಗಿಸಲಾಯಿತು. ಇನ್ನೊಂದು ಕಿಡ್ನಿಯನ್ನು ಎ.ಜೆ. ಆಸ್ಪತ್ರೆಯಲ್ಲೇ ರೋಗಿಯೊಬ್ಬರಿಗೆ ಜೋಡಿಸಲಾಯಿತು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News