×
Ad

ತಾಯಿ- ಸಹೋದರಿ ಕೊಲೆ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ

Update: 2016-04-20 17:33 IST

ಮಂಗಳೂರು, ಎ.20: ತಾಯಿ ಮತ್ತು ಸಹೋದರಿಯ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬನಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ಹಾಗೂ ರೂ 5 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ಮಂಗಳೂರು ತಾಲೂಕಿನ ನೆಲ್ಲಿಗುಡ್ಡೆ ಎಳತ್ತೂರು ನಿವಾಸಿ ವಾಸು ಪೂಜಾರಿ(44) ಶಿಕ್ಷೆಗೊಳಗಾದ ಆರೋಪಿ. ಈತ 2009ರ ಡಿಸೆಂಬರ್ 11ರಂದು ಬೆಳಿಗ್ಗೆ 7.45ರ ವೇಳೆಗೆ ಆರೋಪಿ ವಾಸು ಪೂಜಾರಿ ತನ್ನ ತಾಯಿ ರತಿ ಪೂಜಾರ್ತಿ (61) ಮತ್ತು ಸಹೋದರಿ ವಿಮಲ(25)ರನ್ನು ಕತ್ತಿಯಿಂದ ಕಡಿದು ಕೊಲೆಗೈದಿದ್ದ. ಪ್ರಕರಣಕ್ಕೆ ಸಂಬಂಧಿಸಿ ಮೂಲ್ಕಿ ಠಾಣೆಯಲ್ಲಿ ಈತನ ಇನ್ನೋರ್ವ ಸಹೋದರಿ ಪ್ರೇಮ ಅವರು ದೂರು ದಾಖಲಿಸಿದ್ದರು. ಅಂದಿನ ಮೂಲ್ಕಿ ಠಾಣಾ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್.ನಾಯಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. 13 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು.

ಇದೀಗ ಆರೋಪ ಸಾಬೀತಾಗಿದ್ದು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ರೂ. 5 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ಸಾಧ್ಯವಾಗದಿದ್ದಲ್ಲಿ ಮತ್ತೆ 6 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಎಂ.ಜೋಶಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಹೋಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿ ವಾಸು ಪೂಜಾರಿ ಎಂದಿನಂತೆ ಬೆಳಿಗ್ಗೆ ಮನೆಗೆ ಬಂದು ಈ ಕೃತ್ಯವೆಸಗಿದ್ದ. ನ್ಯಾಯಾಲಯದ ವಿಚಾರಣೆ ವೇಳೆ ತಾನು ಮಾನಸಿಕ ಅಸ್ವಸ್ಥನೆಂದು ಹೇಳಿದ್ದು, ಆದರೆ ಅದನ್ನು ಸಾಬೀತುಪಡಿಸುವಲ್ಲಿ ವಿಪಲನಾಗಿದ್ದ.

ಸರಕಾರಿ ಅಭಿಯೋಜಕರಾಗಿ ಆರಂಭದಲ್ಲಿ ಪುಷ್ಪರಾಜ ಅಡ್ಯಂತಾಯ ಬಳಿಕ ರಾಜು ಪೂಜಾರಿಯವರು ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News