ಪುತ್ತೂರು: ಕಡಮಜಲಿನಲ್ಲಿ ಗೇರು, ಕರಿಮೆಣಸು ಕೃಷಿ ಕಾರ್ಯಾಗಾರ
ಪುತ್ತೂರು: ಎ.26. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಬೆಳ್ಳಿಹಬ್ಬ ಆಚರಣೆ ಅಂಗವಾಗಿ ಗೇರು ಮತ್ತು ಕರಿಮೆಣಸು ಕೃಷಿ ಮಾಹಿತಿ ಕಾರ್ಯಾಗಾರ ಏ.26ರಂದು ಕಡಮಜಲು ಸುಭಾಸ್ ರೈ ಅವರ ತೋಟದಲ್ಲಿ ನಡೆಯಲಿದೆ ಎಂದು ಮಂಗಳೂರು ಮಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಪ್ರಬಂಧಕ ಉದಯ್ ಹೆಗಡೆ ತಿಳಿಸಿದ್ದಾರೆ. ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂಗಳೂರು ವಿಜಯ ಬ್ಯಾಂಕ್ ವಲಯ ಕಚೇರಿ ಉಪ ಮಹಾಪ್ರಬಂಧಕ ಸುರೇಂದ್ರ ಹೆಗ್ಡೆ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ವಿಆರ್‌ಡಿಎಫ್ ಉಪಾಧ್ಯಕ್ಷ ಪ್ರೇಮನಾಥ್ ಆಳ್ವ, ಕಾರ್ಯದರ್ಶಿ ಬಿ.ರಾಜೇಂದ್ರ ರೈ, ಜಿಪಂ ಸದಸ್ಯೆ ಅನಿತ ಹೇಮನಾಥ ಶೆಟ್ಟಿ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಠ, ಗೇರು ಕೃಷಿಕ ಎ.ಕೆ.ಜಯರಾಮ್ ರೈ, ವಿಜಯ ಬ್ಯಾಂಕ್ ಕುಂಬ್ರ ಶಾಖಾಧಿಕಾರಿ ಗೌತಮ್ ಎನ್. ಶರವು ಉಪಸ್ಥಿತರಿರುವರು. ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ನಿವೃತ್ತ ಹಿರಿಯ ವಿಜ್ಞಾನಿ ಡಾ.ಯಧು ಕುಮಾರ್ ಹಾಗೂ ಹಿರಿಯ ವಿಜ್ಞಾನಿ ಡಾ.ಗಂಗಾಧರ ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿರುವರು ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಕೃಷಿ ಮತ್ತು ಇತರ ಪ್ರೋತ್ಸಾಹ ಚಟುವಟಿಕೆಗಾಗಿ ಪ್ರತಿಷ್ಠಾನ ಶ್ರಮಿಸಲಿದೆ. ಇದೇ ಉದ್ದೇಶದಿಂದ ವಿಜಯಾ ಬ್ಯಾಂಕ್‌ನಿಂದ ಪ್ರತಿಷ್ಠಾನಕ್ಕೆ 3 ಕೋಟಿ ರೂ. ನಿಧಿ ನೀಡಲಾಗಿದೆ. ಇದನ್ನು ಠೇವಣಾತಿ ಇಟ್ಟು, ಇದರ ಬಡ್ಡಿ ಹಣದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕರಾವಳಿ ಭಾಗದಲ್ಲಿ ಮಾತ್ರ ಬೇರು ಬಿಟ್ಟಿರುವ ಪ್ರತಿಷ್ಠಾನದಲ್ಲಿ ಈಗಾಗಲೇ 3 ಸಾವಿರ ಸದಸ್ಯರಿದ್ದಾರೆ. ಹುಬ್ಬಳ್ಳಿ, ಧಾರವಾಡ, ಮಂಡ್ಯ, ಹಾವೇರಿಗೆ ವಿಸ್ತರಿಸುವ ಉದ್ದೇಶವಿದೆ ಎಂದು ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗೇರು ಕೃಷಿಕ ಕಡಮಜಲು ಸುಭಾಸ್ ರೈ, ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಜಯಪ್ರಕಾಶ್ ರೈ ಉಪಸ್ಥಿತರಿದ್ದರು.