×
Ad

ಅಚ್ಛೇ ದಿನ್ ಬಂದಿದೆ .. ಬಿಜೆಪಿ ಪಾಲಿಗೆ !

Update: 2016-04-20 22:49 IST

ಹೊಸದಿಲ್ಲಿ, ಎ. 20: ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿ, ಬಿಜೆಪಿಯನ್ನು ಅಧಿಕಾರಕ್ಕೆ ತಂದ ಭಾರತದ ಜನರಿಗೆ ಅಚ್ಛೇ ದಿನ್ ಇನ್ನೂ ಬಂದಿದೆಯೇ ಇಲ್ಲವೇ ಎಂಬುದು ಚರ್ಚೆಯ ವಿಚಾರ. ಆದರೆ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಯ ಪಾಲಿಗೆ ಅಚ್ಛೇ ದಿನ್ ಬಂದಿದೆ ಎಂಬುದು ಮಾತ್ರ ಖಚಿತವಾಗಿದೆ. 2013-14 ಹಾಗು 2014-15 ಸಾಲಿಗೆ ರಾಷ್ಟ್ರೀಯ ಪಕ್ಷಗಳ ಆದಾಯ ಹಾಗೂ ವೆಚ್ಚಗಳ ಕುರಿತ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿಯ ಪ್ರಕಾರ ಬಿಜೆಪಿಯ ವರಮಾನದಲ್ಲಿ ಶೇ.44.02 (ರೂ. 296.62 ಕೋಟಿ ) ಹೆಚ್ಚಳವಾಗಿದೆ. ಇದೆ ಸಂದರ್ಭದಲ್ಲಿ ಸಿಪಿಐ ಪಕ್ಷದ ಆದಾಯ ಶೇ.24.28 ಕಡಿಮೆಯಾಗಿದೆ. ನಿರೀಕ್ಷೆಯಂತೆ, ಬಿಜೆಪಿ ಈ ಸಾಲಿನಲ್ಲಿ ಜಾಹೀರಾತು ಹಾಗೂ ಪ್ರಚಾರಕ್ಕೆ ಅತಿ ಹೆಚ್ಚು ಹಣ ಬಳಸಿದೆ. ಬಿಎಸ್ಪಿ 92.80 ಕೋಟಿ ರೂಪಾಯಿ ಅಪರಿಚಿತ ಮೂಲಗಳಿಂದ ಪಡೆದಿದೆ. ವರದಿಯ ಪ್ರಕಾರ ರಾಷ್ಟ್ರೀಯ ಪಕ್ಷಗಳ ಆದಾಯ 2013-14 ನೆ ಸಾಲಿನಲ್ಲಿ ಶೇ.39(ರೂ. 920.44 ಕೋಟಿ ) ಹೆಚ್ಚಾಗಿದ್ದು, 2014-15 ನೆ ಸಾಲಿನಲ್ಲಿ ಇದು 1,275.78 ಕೋಟಿ ಗೇರಿದೆ. ಈ ಪೈಕಿ ಶೇ.50 ಆದಾಯ ಅಪರಿಚಿತ ಮೂಲಗಳಿಂದ ಬಂದಿದೆ ಎಂಬುದು ಗಮನಾರ್ಹ. ಆದರೆ ಚುನಾವಣಾ ಆಯೋಗದ ಅಧಿಸೂಚನೆಯ 162 ದಿನಗಳ ಬಳಿಕವೂ ಕಾಂಗ್ರೆಸ್ ತನ್ನ ವರಮಾನದ ವರದಿಯನ್ನು ಸಲ್ಲಿಸಿಲ್ಲ. ಆರು ರಾಷ್ಟ್ರೀಯ ಪಕ್ಷಗಳ ಆದಾಯ ವರದಿ ಸಲ್ಲಿಸಲು ಕೊನೆಯ ದಿನಾಂಕ 19 ನವೆಂಬರ್ 2015 ಆಗಿತ್ತು . ಬಿಜೆಪಿ , ಸಿಪಿಎಂ , ಎನ್‌ಸಿಪಿ , ಸಿಪಿಐ, ಬಿಎಸ್ಪಿ ಹಾಗು ಕಾಂಗ್ರೆಸ್ ಪ್ರತಿ ವರ್ಷ ತಮ್ಮ ಆದಾಯ ವಿವರವನ್ನು ಸಲ್ಲಿಸಬೇಕಾಗಿದೆ. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News