ರಸ್ತೆಯೇ ಆಸ್ಪತ್ರೆ, ಪೊಲೀಸರೇ ವೈದ್ಯರು, ಗಂಡು ಮಗುವಿಗೆ ಜನ್ಮ!
ಹೈದರಾಬಾದ್, ಎ.20: ನಗರದ ಹೃದಯಭಾಗದ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ಗೆ ಮಂಗಳವಾರ ಮಧ್ಯಾಹ್ನ ತುರ್ತು ಕರೆ ಬಂತು. ಜನಪ್ರಿಯ ಸಿನೆಮಾ ಟಾಕೀಸ್ ಶಾಂತಿ ಥಿಯೇಟರ್ ಎದುರು ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ. ಇನ್‌ಸ್ಪೆಕ್ಟರ್ ಭೀಮ ರೆಡ್ಡಿ ತಕ್ಷಣ ಮಹಿಳಾ ಪೊಲೀಸರನ್ನೊಳಗೊಂಡ ತಂಡವನ್ನು ಸ್ಥಳಕ್ಕೆ ಧಾವಿಸುವಂತೆ ಸೂಚಿಸಿದರು.
ತಂಡ ಅಲ್ಲಿಗೆ ಹೋದಾಗ, ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಸ್ಥಿತಿಯಲ್ಲಿರಲಿಲ್ಲ. ವೇಳೆ ಮೀರಿತ್ತು. ಆದ್ದರಿಂದ ರಸ್ತೆಪಕ್ಕದಲ್ಲೇ ತಾತ್ಕಾಲಿಕ ಹೆರಿಗೆ ಕೊಠಡಿಯನ್ನು ಸೀರೆ ಹಾಗೂ ಬೆಡ್‌ಶೀಟ್‌ಗಳನ್ನು ಬದಿಗೆ ಕಟ್ಟಿ ಸಿದ್ಧಪಡಿಸಲಾಗಿತ್ತು. ಇಲ್ಲಿ ಜನದಟ್ಟಣೆ ಸೇರದಂತೆ ಹಾಗೂ ಹೆರಿಗೆಗೆ ಅನುಕೂಲವಾಗುವಂತೆ ಪೊಲೀಸರು ಸರ್ಪಗಾವಲು ನಿಂತರು.
ಶಾರದಾ, ಶೋಭಾ, ಜ್ಯೋತಿ ಹಾಗೂ ದಿವ್ಯಾ ಎಂಬ ಮಹಿಳಾ ಪೊಲೀಸರೆ ಯಾವ ಅಂಜಿಕೆಯೂ ಇಲ್ಲದೆ ದಾದಿಯರ ಕಾರ್ಯ ಮಾಡಿ ಸುಸೂತ್ರ ಹೆರಿಗೆಗೆ ಅನುವು ಮಾಡಿಕೊಟ್ಟರು. ಮಹಿಳೆ ಗಂಡುಮಗುವಿಗೆ ಜನ್ಮ ನೀಡಿದಳು. ತಾಯಿ- ಮಗುವನ್ನು ಸ್ವಚ್ಛಗೊಳಿಸಿ, ಹೊಸ ಉಡುಪು ತೊಡಿಸಿ, ಪಕ್ಕದ ಸರಕಾರಿ ಆಸ್ಪತ್ರೆಗೆ ಒಯ್ಯಲಾಯಿತು.