ಕುಷ್ಠರೋಗ: ಟಾಪ್ 3 ದೇಶಗಳ ಸಾಲಿನಲ್ಲಿ ಭಾರತ!
ಹೊಸದಿಲ್ಲಿ,ಎ.20: ಮುಂದಿನ 2020ರೊಳಗೆ ಜಗತ್ತನ್ನು ಸಂಪೂರ್ಣವಾಗಿ ಕುಷ್ಠರೋಗದಿಂದ ಮುಕ್ತಗೊಳಿಸುವ ಗುರಿ ಹೊಂದಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ)ಯು ಈ ಭೀಕರ ರೋಗದ ವಿರುದ್ಧ ಹೋರಾಡಲು ಬುಧವಾರ ಜಾಗತಿಕ ಮಟ್ಟದ ಕಾರ್ಯತಂತ್ರವನ್ನು ಅನಾವರಣಗೊಳಿಸಿತು. ಜಗತ್ತಿನ ಶೇ.80ಕ್ಕೂ ಅಧಿಕ ಹೊಸದಾಗಿ ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿರುವ ಮೂರು ದೇಶಗಳಲ್ಲೊಂದಾದ ಭಾರತಕ್ಕೆ ವಿಶ್ವಸಂಸ್ಥೆಯ ಈ ಯೋಜನೆ ಅತ್ಯಂತ ನಿರ್ಣಾಯಕವಾಗಿದೆ.
ಕುಷ್ಠ ರೋಗ ಹರಡುವಿಕೆಯನ್ನು ತಡೆಯಲು ಬಲವಾದ ಬದ್ಧತೆಯನ್ನು ಪ್ರದರ್ಶಿಸಬೇಕು ಹಾಗೂ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ತೀವ್ರಗೊಳಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವದ ರಾಷ್ಟ್ರಗಳಿಗೆ ಕರೆ ನೀಡಿದೆ. ಕುಷ್ಠರೋಗ ಮುಕ್ತ ಜಗತ್ತಿನ ಸೃಷ್ಟಿಗಾಗಿ, ಆ ಕಾಯಿಲೆ ಪೀಡಿತರಾದ ಜನರ ಕುರಿತಾದ ತಾರತಮ್ಯ ಭಾವನೆಯನ್ನು ತೊಡೆದುಹಾಕಬೇಕೆಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.
2020ರೊಳಗೆ ಜಗತ್ತಿನಲ್ಲಿ ಕುಷ್ಠರೋಗ ಹಾಗೂ ಅದಕ್ಕೆ ಸಂಬಂಧಿಸಿದ ದೈಹಿಕ ವಿಕಲತೆಯಿಂದ ಪೀಡಿತರಾದ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ಗುರಿಯನ್ನು ಈ ಕಾರ್ಯತಂತ್ರವು ಹೊಂದಿದೆ.ಅಲ್ಲದೆ ಹೊಸದಾಗಿ ಕುಷ್ಠರೋಗ ಪತ್ತೆಯಾದ ರೋಗಿಗಳ ಪ್ರಮಾಣವನ್ನು ಪ್ರತಿ ಹತ್ತು ಲಕ್ಷ ಮಂದಿಗೆ ಒಬ್ಬರಂತೆ ಇಳಿಸುವ ಗುರಿಯನ್ನು ಅದು ಇಟ್ಟುಕೊಂಡಿದೆ.
2014ರಲ್ಲಿ 2,13,889 ಕುಷ್ಠ ರೋಗದ ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ ಶೇ.94ರಷ್ಟು ಪ್ರಕರಣಗಳು ಬಾಂಗ್ಲಾ, ಬ್ರೆಝಿಲ್, ಕಾಂಗೊ, ಇಥಿಯೋಪಿಯಾ, ಭಾರತ, ಇಂಡೋನೇಶ್ಯ,ಮಡಗಾಸ್ಕರ್, ಮ್ಯಾನ್ಮಾರ್, ನೇಪಾಳ, ನೈಜಿರೀಯ, ಫಿಲಿಪ್ಪೀನ್ಸ್, ಶ್ರೀಲಂಕಾ ಹಾಗೂ ತಾಂಝಾನಿಯ ದೇಶಗಳಲ್ಲಿ ವರದಿಯಾಗಿವೆ.
ಹೊಸದಾಗಿ ಪತ್ತೆಯಾದ ಶೇ.91ಕುಷ್ಠ ರೋಗದ ಪ್ರಕರಣಗಳು ಭಾರತ, ಬ್ರೆಝಿಲ್, ಇಂಡೊನೇಶ್ಯ ಈ ಮೂರು ದೇಶಗಳಿಂದಲೇ ವರದಿಯಾಗಿರುವುದಾಗಿ ಡಬ್ಲುಎಟ್‌ಒ ತಿಳಿಸಿದೆ.