ಇಳಿಸುವ ಮಾರ್ಗ ಪರಿಶೀಲಿಸುವಂತೆ ಸಿಬಿಎಸ್‌ಇ ಸಲಹೆ
ಹೊಸದಿಲ್ಲಿ, ಎ.20: ವಿದ್ಯಾರ್ಥಿಗಳ ಭಾರವಾದ ಚೀಲಗಳ ಹೊರೆಯನ್ನು ಇಳಿಸುವ ಮಾರ್ಗವನ್ನು ಪರಿಶೀಲಿಸುವಂತೆ ಶಾಲೆಗಳಿಗೆ ಸಿಬಿಎಸ್‌ಇ ಸಲಹೆ ನೀಡಿದೆ.
ವಿದ್ಯಾರ್ಥಿಗಳು ಕೇವಲ ಟೈಂ ಟೇಬಲ್‌ಗೆ ಅನುಸಾರವಾಗಿ ಪುಸ್ತಕಗಳನ್ನು ಒಯ್ಯುವುದನ್ನು ಹೆತ್ತವರು ಹಾಗೂ ಅಧ್ಯಾಪಕರು ಖಚಿತಪಡಿಸಬೇಕೆಂದು ಮಂಡಳಿಯು ಅಧಿಸೂಚನೆಯೊಂದರಲ್ಲಿ ತಿಳಿಸಿದೆ.
ಹಿರಿಯ ವಿದ್ಯಾರ್ಥಿಗಳು ಭಾರವಾದ ರೆಫರೆನ್ಸ್ ಪುಸ್ತಕಗಳು ಅಥವಾ ಅಂತಹ ಇತರ ಪುಸ್ತಕಗಳನ್ನು ಒಯ್ಯುವುದನ್ನು ಶಾಲಾ ಮುಖ್ಯಸ್ಥರು ಹಾಗೂ ಅಧ್ಯಾಪಕರು ನಿರುತ್ತೇಜಿಸಬೇಕೆಂದು ಅದು ಸೂಚಿಸಿದೆ.
ಎಲ್ಲ ತರಗತಿಗಳಲ್ಲಿ ಎಲ್ಲ ಪ್ರಧಾನ ವಿಷಯಗಳ ಕಲಿಯುವಿಕೆಯು ಸಾಧ್ಯವಾದಷ್ಟು ಮಟ್ಟಿಗೆ ಚಟುವಟಿಕೆ ಆಧಾರಿತ ಹಾಗೂ ಐಸಿಟಿ ಬೆಂಬಲಿತವಾಗಿರುವುದುನ್ನು ಖಚಿತಪಡಿಸುವಂತೆಯೂ ಮಂಡಳಿಯು ಶಾಲೆಗಳಿಗೆ ಸಲಹೆ ನೀಡಿದೆ.
ಮಿತಿ ಮೀರಿದ ಭಾರವನ್ನು ನಿವಾರಿಸಲು ಮನೆಗೆಲಸವನ್ನು (ಹೋಂವರ್ಕ್) ಕಡಿಮೆ ಮಾಡಬೇಕು. ಶೈಕ್ಷಣಿಕ ಸಮನ್ವಯಗಾರರು ಅಥವಾ ಮೇಲ್ವಿಚಾರಕರು ಇದರ ನಿಗಾವಹಿಸಬೇಕೆಂದು ಅದು ತಿಳಿಸಿದೆ.
ತರಗತಿಯ ಟೈಂಟೇಬಲ್‌ನಲ್ಲಿ ವಿಷಯಗಳ ವಿಭಾಗವಾರು ನಿಗದಿಯ ಸಾಧ್ಯತೆಯನ್ನು ಹುಡುಕಬೇಕು. ಪ್ರತಿ ದಿನವೂ ಪಠ್ಯೇತರ ಚಟುವಟಿಕೆಗಳನ್ನು ನಡೆಸಬೇಕು. ಇಡೀ ಶೈಕ್ಷಣಿಕ ವರ್ಷದಲ್ಲಿ ಚೀಲದ ಭಾರವನ್ನು ಸಮತೋಲನಗೊಳಿಸಲು ಅವುಗಳನ್ನು ಟೈಂಟೇಬಲ್‌ನಲ್ಲಿ ನಿಗದಿಗೊಳಿಸಬೇಕೆಂದು ಮಂಡಳಿ ಶಾಲೆಗಳಿಗೆ ಸಲಹೆ ನೀಡಿದೆ.